ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ 2024ರಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡದ ಹೀನಾಯ ಪ್ರದರ್ಶನವು ದೊಡ್ಡ ತಲೆನೋವನ್ನುಂಟು ಮಾಡಿದೆ. ಟೂರ್ನಿಯಲ್ಲಿ ಫೈನಲ್ ತಲುಪಿದ್ದರೂ, ಲೀಗ್ ಹಂತದಿಂದ ಅಂತಿಮ ಪಂದ್ಯದವರೆಗೆ ಭಾರತದ ವಿರುದ್ಧ ಆಡಿದ್ದ ಮೂರೂ ಪಂದ್ಯಗಳಲ್ಲಿ ಪಾಕಿಸ್ತಾನ ಏಕಪಕ್ಷೀಯ ಸೋಲು ಅನುಭವಿಸಿತ್ತು. ಈ ಕಳಪೆ ಪ್ರದರ್ಶನವು ತಂಡಕ್ಕೆ ಭಾರಿ ಮುಜುಗರ ತಂದಿದ್ದು, ಇದರ ಬೆನ್ನಲ್ಲೇ ಪಾಕಿಸ್ತಾನ ಟಿ20 ತಂಡದ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ.
ಪ್ರಸ್ತುತ ಪಾಕಿಸ್ತಾನ ಟಿ20 ತಂಡವನ್ನು ಮುನ್ನಡೆಸುತ್ತಿರುವ ಸಲ್ಮಾನ್ ಆಘಾ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಲಾಗುವುದು ಎಂದು ವರದಿಯಾಗಿದೆ. ಅವರ ಬದಲಿಗೆ ಅನುಭವಿ ಆಲ್‌ರೌಂಡರ್ ಶದಾಬ್ ಖಾನ್ ಅವರಿಗೆ ತಂಡದ ನಾಯಕತ್ವವನ್ನು ವಹಿಸುವ ಸಾಧ್ಯತೆ ಇದೆ.
ಈ ವರ್ಷದ ಆರಂಭದಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶದಾಬ್ ಖಾನ್ ಸದ್ಯ ತಂಡದಿಂದ ಹೊರಗುಳಿದಿದ್ದಾರೆ. ಆದರೆ, ಅವರು ಮುಂದಿನ ತಿಂಗಳ ವೇಳೆಗೆ ಸಂಪೂರ್ಣ ಫಿಟ್ ಆಗಲಿದ್ದು, ಪಾಕಿಸ್ತಾನ ಟಿ20 ತಂಡಕ್ಕೆ ಮರಳಿದ ಕೂಡಲೇ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡುವ ಸಾಧ್ಯತೆಗಳಿವೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.
70 ಏಕದಿನ ಮತ್ತು 112 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಶದಾಬ್, ಜೂನ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ತವರು ಸರಣಿಯಲ್ಲಿ ಕೊನೆಯ ಬಾರಿಗೆ ಆಡಿದ್ದರು. ಗಾಯದ ಸಮಸ್ಯೆಗೆ ಒಳಗಾಗುವ ಮೊದಲು ಅವರು ಟಿ20 ತಂಡದ ಉಪನಾಯಕರಾಗಿದ್ದರು. ಶದಾಬ್ ಖಾನ್ ಅವರಿಗೆ ಪಾಕಿಸ್ತಾನ ತಂಡದ ನಾಯಕತ್ವ ಹಾಗೂ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ನಾಯಕತ್ವ ವಹಿಸಿದ ಅನುಭವವೂ ಇದೆ.
ಏಷ್ಯಾಕಪ್‌ನಲ್ಲಿ ಸಲ್ಮಾನ್ ಆಘಾ ಅವರ ನಾಯಕತ್ವ ಮತ್ತು ಆಟಗಾರನಾಗಿ ಅವರ ಕಳಪೆ ಪ್ರದರ್ಶನದಿಂದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅವರ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದೆ. ಅಲ್ಲದೆ, ತಂಡದಲ್ಲಿ ಅವರ ಸ್ಥಾನದ ಬಗ್ಗೆಯೂ ಪ್ರಶ್ನೆಗಳು ಹುಟ್ಟಿಕೊಂಡಿವೆ. ವರದಿಗಳ ಪ್ರಕಾರ, ಮುಂದಿನ ತಿಂಗಳು ನಡೆಯಲಿರುವ ಪಾಕಿಸ್ತಾನ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ತ್ರಿಕೋನ ಸರಣಿಯಲ್ಲಿ ಶದಾಬ್ ಖಾನ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.