ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದ ನಟಿ ಸಂಗೀತಾ ಭಟ್, ಇತ್ತೀಚೆಗೆ ತಮ್ಮ ಆರೋಗ್ಯ ಸ್ಥಿತಿ ಹಾಗೂ ಶಸ್ತ್ರಚಿಕಿತ್ಸೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಾಗೂ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ. ‘ಎರಡನೇ ಸಲ’, ‘ದಯವಿಟ್ಟು ಗಮನಿಸಿ’ ಮತ್ತು ‘ಕಮಲ್ ಶ್ರೀದೇವಿ’ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಈ ನಟಿ, ತಮ್ಮ ಅನಾರೋಗ್ಯವನ್ನು ಮುಚ್ಚಿಡದೆ ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಸಂಗೀತಾ ಭಟ್ ಕಳೆದ ಕೆಲವು ತಿಂಗಳುಗಳಿಂದ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದರು. ವೈದ್ಯಕೀಯ ಪರೀಕ್ಷೆಗಳ ಬಳಿಕ ಗರ್ಭಕೋಶದಲ್ಲಿ 1.75 ಸೆ.ಮೀ ಉದ್ದದ ಗೆಡ್ಡೆಯು ಬೆಳೆದಿರುವುದು ಪತ್ತೆಯಾಯಿತು. ಈ ಸ್ಥಿತಿ ಅವರಿಗೆ ತೀವ್ರವಾದ ನೋವು, ಅತಿಯಾದ ರಕ್ತಸ್ರಾವ ಮತ್ತು ದೈಹಿಕ ಹಾಗೂ ಮಾನಸಿಕ ಒತ್ತಡ ಉಂಟುಮಾಡಿತ್ತು. ಕೊನೆಗೆ ವೈದ್ಯರ ಸಲಹೆಯಂತೆ ಅವರು ಮದರ್‌ಹುಡ್ ಆಸ್ಪತ್ರೆಯಲ್ಲಿ ‘ಹಿಸ್ಟ್ರೋಸ್ಟೋಫಿಕ್ ಪಾಲಿಪೆಕ್ಟ್ರೊಮಿ’ ಎಂಬ ಶಸ್ತ್ರಚಿಕಿತ್ಸೆಗೊಳಗಾದರು.
ಸಂಗೀತಾ ತಮ್ಮ ಪೋಸ್ಟ್‌ನಲ್ಲಿ “ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕೆ ಅಥವಾ ಬೇಡವೆ ಎಂಬ ನಿರ್ಧಾರ ತೆಗೆದುಕೊಳ್ಳಲು ಒಂದು ತಿಂಗಳು ಹಿಡಿಯಿತು. ಎಲ್ಲ ಕೆಲಸಗಳನ್ನು ಮುಗಿಸಿ ಕೊನೆಗೆ ನನ್ನ ದೇಹದ ಕರೆಗೆ ಸ್ಪಂದಿಸಿದೆ” ಎಂದು ಬರೆದಿದ್ದಾರೆ. ಜೊತೆಗೆ ಪತಿ ಸುದರ್ಶನ್ ಮತ್ತು ವೈದ್ಯ ರೋಹಿತಾ ಅವರಿಗೆ ಧನ್ಯವಾದ ಹೇಳಿದ್ದಾರೆ. ತಾವು ಎದುರಿಸಿದ ನೋವು ಮತ್ತು ಆತಂಕದ ನಡುವೆಯೂ ಧೈರ್ಯ ಕಳೆದುಕೊಳ್ಳದೆ ಚಿಕಿತ್ಸೆ ಸ್ವೀಕರಿಸಿದ ವಿಷಯವನ್ನು ಅವರು ಹಂಚಿಕೊಂಡಿದ್ದಾರೆ.
ಅವರ ಶಸ್ತ್ರಚಿಕಿತ್ಸೆಯ ನಂತರ ನಟಿ ರಕ್ಷಿತಾ ಪ್ರೇಮ್ ಸಹ ಬೆಂಬಲದ ಸಂದೇಶ ನೀಡಿದ್ದು, “ಜೀವನವೇ ಒಂದು ಯುದ್ಧ, ಅದರಲ್ಲಿ ಸೋಲದೆ ನಿಲ್ಲುವುದು ಧೈರ್ಯ” ಎಂದು ಹೇಳಿದ್ದಾರೆ.