ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಆಳಂದ ಕ್ಷೇತ್ರದ ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಎಸ್ಐಟಿ (ವಿಶೇಷ ತನಿಖಾ ತಂಡ) ಕಲಬುರಗಿಯಲ್ಲಿ ತನ್ನ ಶೋಧ ಕಾರ್ಯವನ್ನು ಮುಂದುವರಿಸಿದೆ. ಎಸ್ಐಟಿ ಎಸ್ಪಿ ಶುಭನ್ವಿತಾ ಅವರ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡಗಳನ್ನು ರಚಿಸಿ ನಗರದ ಹಲವು ಪ್ರಮುಖರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.
ಗುಬ್ಬಿ ಕಾಲೋನಿ, ವಸಂತ ನಗರ, ಹಾಗೂ ಖುಬಾ ಬಡಾವಣೆಯ ವಿವೇಕಾನಂದ ನಗರದಲ್ಲಿ ದಾಳಿ ನಡೆಸಿದ್ದಾರೆ. ಪ್ರಮುಖವಾಗಿ, ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಗುಬ್ಬಿ ಕಾಲೋನಿಯ ಮನೆಯ ಮೇಲೆ ಎಸ್ಐಟಿ ತಂಡ ಶೋಧ ಕಾರ್ಯ ನಡೆಸಿದೆ. ಈ ದಾಳಿಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಇದೇ ವೇಳೆ, ಎಸ್ಐಟಿಯ ಇನ್ನೊಂದು ತಂಡವು ನಗರದ ಖುಬಾ ಬಡಾವಣೆಯ ವಿವೇಕಾನಂದ ನಗರದಲ್ಲಿರುವ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಬಿಜೆಪಿ ಮಹಾನಗರ ಅಧ್ಯಕ್ಷ ಚಂದು ಪಾಟೀಲ್ ಆಪ್ತ ಆಗಿರುವ ಚಾರ್ಟೆಡ್ ಅಕೌಂಟೆಂಟ್ ಮಲ್ಲಿಕಾರ್ಜುನ ಮಹಾಂತಗೋಳ ಅವರ ಮನೆ ಮೇಲೂ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದೆ.
2023ರಲ್ಲಿ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ಆಗಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ದೂರು ನೀಡಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿತ್ತು. ಮತ್ತೊಂದೆಡೆ ಈ ಮತಗಳ್ಳತನ ಸಂಬಂಧ ರಾಹುಲ್ ಗಾಂಧಿ ಧ್ವನಿ ಎತ್ತಿದ್ದು, ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಬಹಿರಂಗ ಆರೋಪ ಮಾಡಿದ್ದು, ಇದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.