Saturday, October 18, 2025

ಕಾಂತಾರ-1 ಅಭೂತಪೂರ್ವ ಯಶಸ್ಸು: ಎಚ್‌.ಡಿ. ದೇವೇಗೌಡ ಆಶೀರ್ವಾದ ಪಡೆದ ರಿಷಬ್‌ ಶೆಟ್ಟಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

‘ಕಾಂತಾರ: ಚಾಪ್ಟರ್‌ 1’ ಸಿನಿಮಾ ಅಭೂತಪೂರ್ವ ಯಶಸ್ಸನ್ನು ಸಂಭ್ರಮಿಸುತ್ತಿದೆ. ಈ ಮಧ್ಯೆ ರಿಷಬ್‌ ಶೆಟ್ಟಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ದೇವೇಗೌಡ ಅವರೊಂದಿಗಿನ ಫೋಟೊವನ್ನು ರಿಷಬ್‌ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಇದು ಬರೀ ಭೇಟಿಯಲ್ಲ, ನಮ್ಮ ನಾಡಿನ ಹಿರಿಯ ಚೇತನದೊಂದಿಗಿನ ಒಂದು ಸುಂದರ ಸಂವಾದ. ನಾಡಿನ ಅತ್ಯುನ್ನತ ಸ್ಥಾನಕ್ಕೆ ಏರಿ, ಕನ್ನಡಿಗರ ಕೀರ್ತಿಯನ್ನು ಹೆಚ್ಚಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಶೀರ್ವಾದ ಪಡೆದ ಕ್ಷಣಗಳು. ಅವರ ಅನುಭವದ ಮಾತುಗಳು ಮತ್ತು ಪ್ರೀತಿಯ ತಲೆದಡವು, ನನಗೆ ಮತ್ತಷ್ಟು ಶಕ್ತಿ ತುಂಬಿದೆ. ಈ ಪ್ರೀತಿ, ಆಶೀರ್ವಾದ ಸದಾ ಇರಲಿ’ ಎಂದು ಅವರು ಬರೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಎಚ್‌.ಡಿ. ದೇವೇಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚೇತರಿಸಿಕೊಂಡು ತಮ್ಮ ನಿವಾಸಕ್ಕೆ ಮರಳಿದ್ದಾರೆ. ಹೀಗಾಗಿ ಅವರ ಆರೋಗ್ಯವನ್ನೂ ರಿಷಬ್‌ ಶೆಟ್ಟಿ ವಿಚಾರಿಸಿದರು. ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪತ್ನಿ ಜತೆ ʼಕಾಂತಾರ: ಚಾಪ್ಟರ್‌ 1′ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

error: Content is protected !!