Saturday, October 18, 2025

ಯುವಜನರ ಭವಿಷ್ಯ ರೂಪಿಸಲು ಬೆಂಗಳೂರೇ ಸರ್ವಶ್ರೇಷ್ಠ: ವಿದ್ಯಾರ್ಥಿಗಳಿಗೆ ಮಾಜಿ ಡಿಸಿಎಂ ಕಿವಿಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಮತ್ತು ಭವಿಷ್ಯ ರೂಪಿಸುವ ವಿಷಯದಲ್ಲಿ ಸಿಲಿಕಾನ್ ಸಿಟಿ, ಬೆಂಗಳೂರನ್ನು ಮೀರಿಸುವ ನಗರ ದೇಶದಲ್ಲಿ ಇನ್ನೊಂದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಚಿಕ್ಕಬಾಣಾವರದಲ್ಲಿರುವ ಆರ್.ಆರ್. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂತ್ರಜ್ಞಾನದ ಪ್ರಮುಖ ಕೇಂದ್ರ
“ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬೇಕಾದ ಐಟಿ, ಬಿಟಿ, ಏರೋಸ್ಪೇಸ್, ಹಣಕಾಸು, ವೈದ್ಯಕೀಯ ಸೇರಿದಂತೆ ಎಲ್ಲ ಬಗೆಯ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ನಗರ ನಮ್ಮ ಬೆಂಗಳೂರು. ನಿಮ್ಮ ಕನಸು ಮತ್ತು ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಇದಕ್ಕಿಂತ ಪ್ರಶಸ್ತ ಜಾಗ ಇನ್ನೊಂದಿಲ್ಲ,” ಎಂದು ಡಾ. ಅಶ್ವಥ್ ನಾರಾಯಣ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.

ದೇಶದಲ್ಲಿರುವ ಒಟ್ಟು ನವೋದ್ಯಮಗಳ (ಸ್ಟಾರ್ಟ್‌ಅಪ್‌ಗಳ) ಪೈಕಿ ಅರ್ಧದಷ್ಟು ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಹಲವು ಹೆಚ್ಚಿನ ಯಶಸ್ಸನ್ನು ಗಳಿಸಿವೆ. ಹೀಗಾಗಿ, ವಿದ್ಯಾರ್ಥಿಗಳ ಮುಂದೆ ಅವಕಾಶಗಳ ಹೆಬ್ಬಾಗಿಲೇ ತೆರೆದಿದೆ ಎಂದು ಅವರು ಉಲ್ಲೇಖಿಸಿದರು.

ವಿದ್ಯಾರ್ಥಿಗಳಿಗೆ ಪ್ರಮುಖ ಸಲಹೆಗಳು
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, “ಹಿಡಿದ ಕೆಲಸವನ್ನು ಸಾಧಿಸಲು ನಿಮಗೆ ನೀವೇ ಸಹಾಯ ಮಾಡಿಕೊಳ್ಳಬೇಕು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಸ್ಪೂನ್ ಫೀಡಿಂಗ್’ ವ್ಯವಸ್ಥೆ ಇರುವುದಿಲ್ಲ, ಆದರೆ ಅತ್ಯುತ್ತಮ ಮಾರ್ಗದರ್ಶನ ದೊರೆಯುತ್ತದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು,” ಎಂದು ಸಲಹೆ ನೀಡಿದರು.

ಕಾಲೇಜಿನಲ್ಲಿ ಬೋಧಿಸುವ ಮುಖ್ಯ ಕೋರ್ಸ್‌ಗಳ ಜೊತೆಗೆ ಇನ್ನೊಂದಿಷ್ಟು ಹೆಚ್ಚುವರಿ ವಿಷಯಗಳನ್ನು ಕಲಿತುಕೊಳ್ಳಲು ಅವಕಾಶಗಳು ಮುಕ್ತವಾಗಿವೆ. ಅದರ ಪ್ರಯೋಜನ ಪಡೆಯಿರಿ ಎಂದು ಪ್ರೇರೇಪಿಸಿದರು. ಜೊತೆಗೆ, ದೇಹದ ಆರೋಗ್ಯದ ಜೊತೆಗೆ ಮನಸ್ಸಿನ ಆರೋಗ್ಯಕ್ಕೂ ಗಮನ ಕೊಡುವುದು ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಒತ್ತಿ ಹೇಳಿದರು.

error: Content is protected !!