Saturday, October 18, 2025

ಹಾಲಿ ಚಾಂಪಿಯನ್ ಆರ್​ಸಿಬಿ ಮಾಲೀಕತ್ವ ಬದಲಾವಣೆ: ಮಾರಾಟದ ಸುಳಿಯಲ್ಲಿ ಬೆಂಗಳೂರು ಫ್ರಾಂಚೈಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡವು ಐಪಿಎಲ್ 2026 ಟೂರ್ನಿಗೂ ಮುನ್ನ ಹೊಸ ಮಾಲೀಕರ ಕೈಸೇರಬಹುದು ಎಂಬ ವದಂತಿಗಳು ಕೆಲವು ದಿನಗಳಿಂದ ಹರಿದಾಡುತ್ತಿವೆ.

ಕ್ರಿಕ್‌ಬಜ್ ವರದಿಯ ಪ್ರಕಾರ, ಪ್ರಸ್ತುತ ಮಾಲೀಕರಾದ ಡಯಾಜಿಯೊ ಕಂಪನಿಯು ಫ್ರಾಂಚೈಸಿಗೆ ಸುಮಾರು ರೂ. 17,587 ಕೋಟಿ ದರವನ್ನು ನಿಗದಿಪಡಿಸಿದೆ ಎನ್ನಲಾಗಿದ್ದು, ಈಗಾಗಲೇ ಆರು ಕಂಪನಿಗಳು ಆರ್​ಸಿಬಿಯನ್ನು ಖರೀದಿಸಲು ಆಸಕ್ತಿ ತೋರಿಸಿವೆ.

ಡಯಾಜಿಯೊ ಕಂಪನಿಯಲ್ಲಿ ಭಿನ್ನಾಭಿಪ್ರಾಯ
ಪ್ರಸ್ತುತ ಡಿಯಾಜಿಯೊ ಸಂಸ್ಥೆಯು ಆರ್​ಸಿಬಿ ತಂಡದ ಮಾಲೀಕತ್ವವನ್ನು ಹೊಂದಿದೆ. ಆದಾಗ್ಯೂ, ಐಪಿಎಲ್ ಚಾಂಪಿಯನ್ ಆಗಿರುವ ತಮ್ಮ ತಂಡವನ್ನು ಮಾರಾಟ ಮಾಡುವ ನಿರ್ಧಾರದ ಕುರಿತು ಕಂಪನಿಯೊಳಗೇ ಭಿನ್ನಾಭಿಪ್ರಾಯಗಳು ಮೂಡಿವೆ ಎಂದು ವರದಿಯಾಗಿದೆ. ಡಿಯಾಜಿಯೊದ ಭಾರತೀಯ ಶಾಖೆಯು ಈ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದೆ ಮತ್ತು ಅತ್ಯಂತ ಜನಪ್ರಿಯ ಐಪಿಎಲ್ ತಂಡವನ್ನು ತಮ್ಮಲ್ಲೇ ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ ಎಂದು ತಿಳಿದುಬಂದಿದೆ.

ಖರೀದಿ ರೇಸ್‌ನಲ್ಲಿರುವ ಪ್ರಮುಖ ಕಂಪನಿಗಳು
ಆರ್‌ಸಿಬಿ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿರುವ ಪ್ರಮುಖ ಸಂಸ್ಥೆಗಳ ಪಟ್ಟಿಯಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಆದರ್ ಪೂನವಾಲ್ಲಾ ಹೆಸರು ಮುಂಚೂಣಿಯಲ್ಲಿದೆ. ಪೂನವಾಲಾ ಅವರೊಂದಿಗೆ, ಜೆಎಸ್‌ಡಬ್ಲ್ಯೂ ಗ್ರೂಪ್ ಮತ್ತು ಅದಾನಿ ಗ್ರೂಪ್ ಕೂಡ ಆಸಕ್ತಿ ವ್ಯಕ್ತಪಡಿಸಿವೆ. ಈ ಮೂರು ಪ್ರಮುಖ ಸಂಸ್ಥೆಗಳ ಜೊತೆಗೆ, ದೆಹಲಿ ಮೂಲದ ಒಬ್ಬ ಬಿಲಿಯನೇರ್ ಕೈಗಾರಿಕೋದ್ಯಮಿ ಮತ್ತು ಎರಡು ಅಮೇರಿಕನ್ ಖಾಸಗಿ ಇಕ್ವಿಟಿ ಸಂಸ್ಥೆಗಳು ಸಹ ರೇಸ್‌ನಲ್ಲಿವೆ ಎನ್ನಲಾಗಿದೆ.

ಅದಾನಿ ಗ್ರೂಪ್‌ನ ಹಳೆಯ ಪ್ರಯತ್ನ: ಐಪಿಎಲ್‌ನಲ್ಲಿ ತಂಡ ಹೊಂದುವ ಬಯಕೆ ಅದಾನಿ ಗ್ರೂಪ್‌ಗೆ ಬಹಳ ಹಿಂದಿನಿಂದಲೂ ಇದೆ. 2022 ರಲ್ಲಿ ಎರಡು ಹೊಸ ತಂಡಗಳನ್ನು ಮಾರಾಟ ಮಾಡಿದಾಗ, ಅದಾನಿ ಗ್ರೂಪ್ ಗುಜರಾತ್ ತಂಡಕ್ಕಾಗಿ ಬಿಡ್ ಮಾಡಿತ್ತಾದರೂ, ಬಿಡ್ ಗೆಲ್ಲುವಲ್ಲಿ ವಿಫಲವಾಗಿತ್ತು. ಹೀಗಾಗಿ ಈ ಬಾರಿ ಆರ್​ಸಿಬಿ ತಂಡವನ್ನು ಖರೀದಿಸುವ ಪ್ರಯತ್ನದಲ್ಲಿದೆ.

ಜಿಂದಾಲ್ ಗ್ರೂಪ್ (ಜೆಎಸ್‌ಡಬ್ಲ್ಯೂ): ಪ್ರಸ್ತುತ ಜಿಂದಾಲ್ ಗ್ರೂಪ್ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಶೇಕಡಾ 50 ರಷ್ಟು ಪಾಲನ್ನು ಹೊಂದಿದೆ. ಒಂದು ವೇಳೆ ಜಿಂದಾಲ್ ಗ್ರೂಪ್ ಆರ್​ಸಿಬಿಗೆ ಬಿಡ್ ಮಾಡಿ ತಂಡವನ್ನು ಖರೀದಿಸಿದರೆ, ನಿಯಮಗಳ ಪ್ರಕಾರ ಡೆಲ್ಲಿ ಫ್ರಾಂಚೈಸಿಯಿಂದ ಹೊರಬರಬೇಕಾಗುತ್ತದೆ.

ಮುಂದಿನ ಹಾದಿ
ಮಾರಾಟ ಪ್ರಕ್ರಿಯೆ ಕುರಿತು ಸಲಹೆ ಪಡೆಯಲು ಡಯಾಜಿಯೊ ಕಂಪನಿಯು ಸಿಟಿ ಬ್ಯಾಂಕ್ ಸೇರಿದಂತೆ ಎರಡು ಖಾಸಗಿ ಬ್ಯಾಂಕ್‌ಗಳನ್ನು ನೇಮಿಸಿದೆ. ಆದಾಗ್ಯೂ, ಈ ಖರೀದಿ ಒಪ್ಪಂದವು ಅಂತಿಮವಾಗಿ ಪೂರ್ಣಗೊಳ್ಳುತ್ತದೆಯೇ ಅಥವಾ ಡಿಯಾಜಿಯೊ ಕಂಪನಿಯು ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಹಾಗಾಗಿ, ಮುಂಬರುವ ಟ್ರೇಡ್ ವಿಂಡೋ ಮತ್ತು ಮಿನಿ ಹರಾಜಿನ ಮುಂಚೆಯೇ ಹಾಲಿ ಚಾಂಪಿಯನ್ ಆರ್​ಸಿಬಿ ಫ್ರಾಂಚೈಸಿ ಹೊಸ ಮಾಲೀಕರನ್ನು ಪಡೆಯುತ್ತದೋ ಅಥವಾ ಹಳೆಯ ಮಾಲೀಕರ ಬಳಿಯೇ ಉಳಿಯುತ್ತದೋ ಎಂಬುದು ಐಪಿಎಲ್ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.

error: Content is protected !!