Monday, October 20, 2025

ದೇವೀರಮ್ಮನ ದರುಶನಕ್ಕೆ ಹರಿದುಬಂದ ಜನಸಾಗರ: ಆದ್ರೆ ಮಳೆರಾಯನೇ ದೊಡ್ಡ ಸವಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಮಗಳೂರಿನ ಶಕ್ತಿ ದೇವತೆ ದೇವೀರಮ್ಮನ ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಬೆಟ್ಟ ಹತ್ತಲು ಉತ್ಸುಕರಾಗಿದ್ದಾರೆ. ಆದರೆ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಆರಂಭವಾದ ಧಾರಾಕಾರ ಮಳೆ ಭಕ್ತರ ಪ್ರಯಾಣಕ್ಕೆ ಸವಾಲಾಗಿ ಪರಿಣಮಿಸಿದೆ. ಮಳೆಯ ಮಧ್ಯದಲ್ಲಿಯೇ ದೇವೀರಮ್ಮನ ದರ್ಶನ ಪಡೆಯಲು ಭಕ್ತರು ಬೆಟ್ಟವನ್ನು ಹತ್ತಲು ಅನಿವಾರ್ಯತೆ ಎದುರಾಗಿದೆ.

ಸಮುದ್ರ ಮಟ್ಟದಿಂದ ಸುಮಾರು 3,800 ಅಡಿಗಳ ಎತ್ತರದಲ್ಲಿರುವ ದೇವೀರಮ್ಮನ ದೇಗುಲಕ್ಕೆ ತಲುಪಲು ಭಕ್ತರು ಸುಮಾರು 5-6 ಕಿ.ಮೀ. ದೂರದ ಪಿರಮಿಡ್ ಆಕಾರದ ಕಡಿದಾದ ಮಾರ್ಗವನ್ನು ಹತ್ತಬೇಕು. ಈ ಬಾರಿ ಜಿಲ್ಲಾಡಳಿತ ಮತ್ತು ದೇವಸ್ಥಾನ ಸಮಿತಿ ಭಾನುವಾರ (ಅ.19) ಮತ್ತು ಸೋಮವಾರ (ಅ.20) ಎರಡು ದಿನ ಬೆಟ್ಟ ಹತ್ತಲು ಅವಕಾಶ ನೀಡಿದ್ದು, ಈ ಎರಡು ದಿನಗಳಲ್ಲಿ 60–70 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಆದಾಗ್ಯೂ, ಜಿಲ್ಲೆಯಲ್ಲಿ ಈ ಅವಧಿಯಲ್ಲಿ 10–30 ಮಿ.ಮೀ. ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಶನಿವಾರ ಸಂಜೆದಿಂದಲೇ ಮಳೆಯು ತೀವ್ರವಾಗಿ ಬೀಳುತ್ತಿದೆ. ಮಳೆ ಹೆಚ್ಚಾದರೆ ಗುಡ್ಡವು ಜಾರುವ ಅಪಾಯವಿರುವುದರಿಂದ, ಭಕ್ತರು ವಿಶೇಷ ಎಚ್ಚರಿಕೆಯಿಂದ ಮಾರ್ಗವನ್ನು ಹತ್ತಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ. ಭಕ್ತರ ಸುರಕ್ಷತೆಗಾಗಿ ಮಾರ್ಗಸೂಚಿ ಪ್ರಕಟಿಸಲಾಗಿದೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ತುರ್ತು ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು ನಿಯೋಜಿಸಲಾಗಿದೆ.

error: Content is protected !!