ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಸೌಲಭ್ಯಗಳನ್ನು ಬಳಸಿಕೊಂಡು ದೊಡ್ಡ ಮಟ್ಟಕ್ಕೆ ಬೆಳೆದವರು ಈಗ ಬೆಂಗಳೂರಿನ ಬಗ್ಗೆ ಟೀಕೆ ಮಾಡಿ ಟ್ವೀಟ್ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಘನತೆಗೆ ಚ್ಯುತಿ ತರುತ್ತಿರುವವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಕೋರಮಂಗಲದ ವೀರ ಯೋಧ ಉದ್ಯಾನವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಬೆಂಗಳೂರು ನಡಿಗೆ’ ಅಭಿಯಾನದ ಅಂಗವಾಗಿ ‘ನಾಗರಿಕರೊಂದಿಗೆ ಸಂವಾದ’ ನಡೆಸಿದರು.
ಬೆಂಗಳೂರಿಗೆ ಬಂದು ಬೆಳೆದಿರುವವರು ಹಿಂದೆ ಹೇಗಿದ್ದೆವು, ಪ್ರಸ್ತುತ ಹೇಗಿದ್ದೇವೆ ಎಂಬುದನ್ನು ಮರೆತು ಟ್ವೀಟ್ ಮಾಡುತ್ತಿದ್ದಾರೆ. ನಾವು ನಮ್ಮ ಮೂಲವನ್ನು ಮರೆಯಬಾರದು. ಮೂಲವನ್ನು ಮರೆತರೆ ಯಶಸ್ಸು ಸಾಧಿಸುವುದಿಲ್ಲ ಎಂದು ನಾನು ನಂಬಿದ್ದೇನೆ ಎಂದು ತಿಳಿಸಿದರು.
ನಗರದಾದ್ಯಂತ ಎಲ್ಲೆಲ್ಲಿ ರಸ್ತೆಗುಂಡಿಗಳಿವೆ ಎಂಬುದನ್ನು ಸಾರ್ವಜನಿಕರೇ ಫೋಟೋ ತೆಗೆದು ಅದನ್ನು ಮೊಬೈಲ್ ಆಪ್ ಮೂಲಕ ಸರ್ಕಾರದ ಗಮನಕ್ಕೆ ತರುವ ವ್ಯವಸ್ಥೆಯನ್ನು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ನಾವು ರೂಪಿಸಿದ್ದೇವೆ. ಮಾಧ್ಯಮಗಳೂ ಸಹ ಸುದ್ದಿ ಮಾಡುತ್ತಿವೆ. ನಾನು ಟೀಕೆ ಹಾಗೂ ವಿಮರ್ಶೆಗಳನ್ನು ಸ್ವಾಗತಿಸುತ್ತೇನೆ. ಟೀಕೆಗಳು ಇದ್ದಾಗಲೇ ಪ್ರಜಾಪ್ರಭುತ್ವಕ್ಕೆ ಹೆಚ್ಚು ಮೌಲ್ಯ ಇರುತ್ತದೆ. ಆದರೆ ಕೆಲವರು ವಿಕೋಪಕ್ಕೆ ಹೋಗಿ ಟೀಕೆ ಮಾಡುತ್ತಿದ್ದಾರೆ. ಅಂತಹವರ ಟೀಕೆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಜನ ನಮಗೆ ಅವಕಾಶ ನೀಡಿದ್ದು, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದರು.