Tuesday, October 21, 2025

ಆಸ್ಟ್ರೇಲಿಯಾ ಎದುರು ಭಾರತಕ್ಕೆ ಮುಖಭಂಗ: ರಾಹುಲ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಶ್ರೀಕಾಂತ್ ಕೆಂಡಾಮಂಡಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಭಾರೀ ಸೋಲು ಅನುಭವಿಸಿದೆ. ಮಳೆಯಿಂದಾಗಿ ಕೇವಲ 26 ಓವರ್‌ಗಳ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕೇವಲ 136 ರನ್‌ಗಳಲ್ಲೇ ಆಲೌಟ್ ಆಯಿತು. ಈ ಕಡಿಮೆ ಮೊತ್ತದಲ್ಲಿಯೂ ನಾಯಕತ್ವದ ಹೊಣೆ ಹೊತ್ತಂತೆ ಆಡಿದ ಕೆಎಲ್ ರಾಹುಲ್ 38 ರನ್‌ಗಳ ಪ್ರಮುಖ ಇನ್ನಿಂಗ್ಸ್ ಆಡಿದರು, ಆದರೆ ರಾಹುಲ್‌ರನ್ನು ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿರುವ ನಿರ್ಧಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಈ ನಿರ್ಧಾರವನ್ನು ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರವಾಗಿ ಟೀಕಿಸಿದ್ದಾರೆ. ಅವರು ರಾಹುಲ್‌ಗೂ ಮುನ್ನ ಅಕ್ಷರ್ ಪಟೇಲ್‌ರನ್ನು ಕಳುಹಿಸುವುದು ಸಂಪೂರ್ಣ ಮೂರ್ಖತನ ಎಂದು ಹೇಳಿದ್ದಾರೆ. ಶ್ರೀಕಾಂತ್ ಅವರ ಪ್ರಕಾರ, “ಕೆಎಲ್ ರಾಹುಲ್ ತಂಡದ ಅತ್ಯುತ್ತಮ ತಾಂತ್ರಿಕ ಆಟಗಾರರಲ್ಲಿ ಒಬ್ಬರು. ಅವರನ್ನು ಆರನೇ ಕ್ರಮಾಂಕದಲ್ಲಿ ಕಳುಹಿಸುವುದು ಹಾಸ್ಯಾಸ್ಪದ ನಿರ್ಧಾರ. ನಾನು ನಾಯಕನಾಗಿದ್ದರೆ, ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸುತ್ತಿದ್ದೆ,” ಎಂದಿದ್ದಾರೆ.

“ಭಾರತದ ಬ್ಯಾಟಿಂಗ್ ಕ್ರಮದಲ್ಲಿ ಎಡ-ಬಲ ಸಂಯೋಜನೆಗೆ ಹೆಚ್ಚು ಮಹತ್ವ ನೀಡಬೇಡಿ. 150 ರನ್‌ಗಳ ಗಡಿ ತಲುಪಿದ್ದರೆ, ಪಂದ್ಯ ಸಂಪೂರ್ಣವಾಗಿ ಬೇರೆ ದಿಕ್ಕಿನಲ್ಲಿ ತಿರುಗಬಹುದಿತ್ತು,” ಎಂದಿದ್ದಾರೆ. ಶ್ರೀಕಾಂತ್ ಅವರ ಈ ಟೀಕೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಟೀಂ ಇಂಡಿಯಾದ ಬ್ಯಾಟಿಂಗ್ ತಂತ್ರದ ಬಗ್ಗೆ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

error: Content is protected !!