Thursday, October 23, 2025

ಆರ್‌ಎಸ್‌ಎಸ್‌ ಪಥಸಂಚಲನದಿಂದ ಅಮಾನತುಗೊಂಡ ಪಿಡಿಒಗೆ ಮತ್ತೊಂದು ಸಂಕಷ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪಥಸಂಚಲನದಲ್ಲಿ ಗಣವೇಷಧಾರಿಯಾಗಿ ಭಾಗವಹಿಸಿ ಅಮಾನತುಗೊಂಡಿದ್ದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರವೀಣ್‌ ಕುಮಾರ್‌ ಅವರಿಗೆ ಮತ್ತೊಂದು ಗಂಭೀರ ಸಂಕಷ್ಟ ಎದುರಾಗಿದೆ. ಕರ್ತವ್ಯ ಲೋಪ ಮತ್ತು ಅನುದಾನ ದುರ್ಬಳಕೆಯ ಆರೋಪಗಳು ಅವರ ವಿರುದ್ಧ ಕೇಳಿಬಂದಿದ್ದು, ಈ ಸಂಬಂಧ ಸಲ್ಲಿಸಲಾದ ವರದಿ ಪರಿಶೀಲನೆಯ ಹಂತದಲ್ಲಿದೆ.

ಲಿಂಗಸುಗೂರು ತಾಲ್ಲೂಕಿನ ರೋಡಲಬಂಡಾ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿ ಕೆಲಸ ಮಾಡುತ್ತಿದ್ದ ಪ್ರವೀಣ್‌ ಕುಮಾರ್‌, 2023ರ ಜೂನ್‌ 15 ರಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್‌ ಅವರ ಆಪ್ತ ಸಹಾಯಕ ಹುದ್ದೆಗೆ ನಿಯೋಜನೆಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅವರನ್ನು ಪಿಡಿಒ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದರು. ಈ ಆದೇಶದ ಅನ್ವಯ ಜೂನ್‌ 30 ರಂದು ಗ್ರಾಪಂನ ಕಾರ್ಯಭಾರವನ್ನು ಹಸ್ತಾಂತರಿಸಬೇಕಿತ್ತು.

ಆದರೆ, ಜಿಲ್ಲಾಧಿಕಾರಿಗಳ ಬಿಡುಗಡೆ ಆದೇಶ ಮತ್ತು ಕಾರ್ಯಭಾರ ಹಸ್ತಾಂತರದ ನಡುವಿನ ಅವಧಿಯಲ್ಲೇ, ಅಂದರೆ ಜೂನ್‌ 25 ರಿಂದ ಜೂನ್‌ 30 ರ ಅವಧಿಯಲ್ಲಿ ಪ್ರವೀಣ್‌ ಕುಮಾರ್‌ ಅವರು ತಾವು ನಿರ್ವಹಿಸುತ್ತಿದ್ದ ಎರಡು ಪಂಚಾಯತಿಗಳ ಅನುದಾನದಿಂದ ಒಟ್ಟು 14.38 ಲಕ್ಷ ರೂ. ಹಣವನ್ನು ಖರ್ಚು ಮಾಡಿದ್ದಾರೆ ಎಂಬ ಗಂಭೀರ ಆರೋಪವಿದೆ.

ಎರಡು ಪಂಚಾಯತಿಗಳಲ್ಲಿ ಹಣ ಖರ್ಚು:

ಗಣದಿನ್ನಿ ಪಂಚಾಯತಿಯಲ್ಲಿ: 5.18 ಲಕ್ಷ ರೂ., ಹಿರೇಹಣಗಿ ಪಂಚಾಯತ್‌ನಲ್ಲಿ: 9.20 ಲಕ್ಷ ರೂ. ಖರ್ಚು.

ಏನು ಖರೀದಿ ಮಾಡಲಾಗಿದೆ?: 15ನೇ ಹಣಕಾಸು ಯೋಜನೆಯ ಅನುದಾನದಡಿ ಬೀದಿ ದೀಪ, ಸ್ಯಾನಿಟರಿ ಸಾಮಗ್ರಿ, ಪಂಪ್‌ಗಳು ಸೇರಿ ಹಲವು ಸಾಮಗ್ರಿಗಳ ಖರೀದಿಗೆ ಈ ಹಣವನ್ನು ವೆಚ್ಚ ಮಾಡಲಾಗಿದೆ.

ಆರೋಪವೇನು?:

ಬೇರೆ ಹುದ್ದೆಗೆ ನಿಯೋಜನೆಯಾಗಿದ್ದರೂ ಮತ್ತು ಜಿಲ್ಲಾಧಿಕಾರಿಗಳ ಆದೇಶದನ್ವಯ ಕರ್ತವ್ಯದಿಂದ ಬಿಡುಗಡೆಯಾಗಿದ್ದರೂ ಪ್ರವೀಣ್‌ ಅವರು ಪಿಡಿಒ ಸ್ಥಾನದಲ್ಲಿ ಮುಂದುವರಿದು, ನಿಯಮಬಾಹಿರವಾಗಿ ಈ ಅನುದಾನದ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಎಲ್ಲಾ ಕರ್ತವ್ಯ ಲೋಪ ಮತ್ತು ಹಣಕಾಸು ದುರ್ಬಳಕೆ ಸಂಬಂಧ ಸಿರವಾರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯವರು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ (ಸಿಇಒ) ವರದಿ ಸಲ್ಲಿಸಿದ್ದು, ವರದಿಯು ಪ್ರಸ್ತುತ ಪರಿಶೀಲನೆ ಹಂತದಲ್ಲಿದೆ.

error: Content is protected !!