Wednesday, October 29, 2025

ಸಾನ್ವಿ ಗೊಂಬೆ ಮನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ: ಬೆಂಗಳೂರಿನ ಮಂಜುಳಾ, ಮದನ್ ದಂಪತಿಗೆ ಗೌರವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಹೊರವಲಯದ ಗೊಟ್ಟಿಗೆರೆ ಸಮೀಪದ ವಸತಿ ಸಮುಚ್ಛಯದಲ್ಲಿ ವಾಸಿಸುತ್ತಿರುವ ಮಂಜುಳಾ ಹಾಗೂ ಮದನ್ ದಂಪತಿ ಕೂರಿಸಿದ್ದ ಐತಿಹಾಸಿಕ ದಸರಾ ಗೊಂಬೆಗಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿವೆ.

ಸಮುಚ್ಛಯದ ನಿವಾಸಿಗಳ ಸಮ್ಮುಖದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ತೀರ್ಪುಗಾರ ಹರೀಶ್ ಅವರು ಮಂಜುಳಾ ಹಾಗೂ ಮದನ್ ದಂಪತಿಗೆ ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕ ನೀಡಿ ಗೌರವಿಸಿದರು. ಕಳೆದ 30 ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ದಸರಾ ಗೊಂಬೆಗಳನ್ನು ಕೂರಿಸುವ ಮಂಜುಳಾ ಹಾಗೂ ಮದನ್ ದಂಪತಿ ಈ ಬಾರಿ ಆಪರೇಷನ್ ಸಿಂಧೂರ, ಪಹಲ್ಗಾಮ್ ಹತ್ಯಾಕಾಂಡ ಹಾಗೂ ಅಹಮದಾಬಾದ್ ವಿಮಾನ ದುರಂತ ನೆನಪಿಸುವ ಗೊಂಬೆಗಳನ್ನು ಪ್ರದರ್ಶಿಸಿ, ಗಮನ ಸೆಳೆದಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹರೀಶ್, ಮಂಜುಳಾ ಹಾಗೂ ಮದನ್ ದಂಪತಿ 100 ನಿರೂಪಣಾ ವಿಷಯಗಳನ್ನು ಇಟ್ಟುಕೊಂಡು 1 ಸಾವಿರದ 500ಕ್ಕೂ ಅಧಿಕ ದಸರಾ ಗೊಂಬೆಗಳ ಪ್ರದರ್ಶನ ಏರ್ಪಡಿಸಿ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗೊಂಬೆಗಳ ಮೂಲಕ ಪೌರಾಣಿಕ ಕಥೆಗಳು ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ತಿಳುವಳಿಕೆ ಮೂಡಿಸಿದ್ದಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ನೀಡಿ ಗೌರವಿಸಲಾಗಿದೆ ಎಂದರು.

ಮದನ್, ಸಾನ್ವಿ ಮಾತನಾಡಿ ಗೊಂಬೆ ಮನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ಇದಕ್ಕೆ ಸಹಕರಿಸಿದ ಎಲ್ಲಾ ಸ್ನೇಹಿತರು ಹಾಗೂ ಹಿತೈಷಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು. ಮಂಜುಳಾ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ ಸಿಕ್ಕಿರುವುದು ಹೆಮ್ಮೆಯ ವಿಚಾರ. ನಮ್ಮ ಶ್ರಮ ಪರಿಗಣಿಸಿ ಪ್ರಶಸ್ತಿ ನೀಡಿದ್ದಕ್ಕೆ ಧನ್ಯವಾದ. ಈ ಪ್ರಶಸ್ತಿ ಬಳಿಕ ನಮ್ಮ ಜವಾಬ್ದಾರಿ ಹೆಚ್ಚಾಗಿದೆ ಎಂದು ತಮ್ಮ ಸಂತಸ ಹಂಚಿಕೊಂಡರು.

error: Content is protected !!