ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾರಿಗೆ ಇಲಾಖೆಗೆ ನಿಗದಿತ ತೆರಿಗೆ ಕಟ್ಟದೆ ಅಕ್ರಮವಾಗಿ ರಾಜ್ಯದಲ್ಲಿ ಸಂಚರಿಸುತ್ತಿದ್ದ ಅನ್ಯ ರಾಜ್ಯಗಳ 25 ಟೂರಿಸ್ಟ್ ಬಸ್ಗಳಿಗೆ ಆರ್ಟಿಓ ಅಧಿಕಾರಿಗಳು ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ಬಿಸಿ ಮುಟ್ಟಿಸಿದ್ದಾರೆ.
ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಆನೇಕಲ್‌ನ ಅತ್ತಿಬೆಲೆ ಚೆಕ್ ಪೋಸ್ಟ್‌ನಲ್ಲಿ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಸಾರಿಗೆ ಇಲಾಖೆಯ ಅಧಿಕಾರಿಗಳು, ತೆರಿಗೆ ಬಾಕಿ ಉಳಿಸಿಕೊಂಡು ರಾಜ್ಯದಲ್ಲಿ ಸಂಚರಿಸುತ್ತಿದ್ದ ಬರೋಬ್ಬರಿ 25 ಬಸ್‌ಗಳನ್ನು ವಶಕ್ಕೆ ಪಡೆದು ಸೀಜ್ ಮಾಡಿದ್ದಾರೆ. ಈ ಬಸ್ ಮಾಲೀಕರಿಗೆ ಟ್ಯಾಕ್ಸ್ ಕ್ಲಿಯರ್ ಮಾಡಲು ನೋಟೀಸ್ ನೀಡಲಾಗಿದೆ.
ಅಪರ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ನೇತೃತ್ವದಲ್ಲಿ, ಜಂಟಿ ಸಾರಿಗೆ ಆಯುಕ್ತೆ ಶೋಭಾ ಹಾಗೂ ಗಾಯತ್ರಿ ಅವರ ತಂಡವು ಈ ದಿಢೀರ್ ತಪಾಸಣೆ ನಡೆಸಿದೆ. ತಮಿಳುನಾಡು, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ನೋಂದಣಿಯ ಬಸ್‌ಗಳನ್ನು ತಡೆದು ಪರಿಶೀಲನೆ ನಡೆಸಿದಾಗ, ಅವು ಕರ್ನಾಟಕ ರಾಜ್ಯಕ್ಕೆ ತೆರಿಗೆ ಕಟ್ಟದೆ ಓಡಾಡುತ್ತಿದ್ದು, ಸಾರಿಗೆ ಇಲಾಖೆಗೆ ನಷ್ಟ ಉಂಟು ಮಾಡುತ್ತಿರುವುದು ಬಯಲಾಗಿದೆ.
44 ಲಕ್ಷ ರೂ.ಗೂ ಅಧಿಕ ತೆರಿಗೆ ಬಾಕಿ:
ವಶಕ್ಕೆ ಪಡೆದ 25 ಖಾಸಗಿ ಟೂರಿಸ್ಟ್ ಬಸ್ಗಳಿಂದ ಒಟ್ಟಾರೆಯಾಗಿ 44 ಲಕ್ಷ ರೂಪಾಯಿಗೂ ಅಧಿಕ ಟ್ಯಾಕ್ಸ್ ಬಾಕಿ ಇರುವುದು ಕಂಡುಬಂದಿದೆ. “ಪರವಾನಗಿ ನಿಯಮಗಳ ಉಲ್ಲಂಘನೆ ಮತ್ತು ಕರ್ನಾಟಕದ ಸ್ಟೇಟ್ ಟ್ಯಾಕ್ಸ್ ಕಟ್ಟದ ಕಾರಣಕ್ಕಾಗಿ ಈ ವಾಹನಗಳನ್ನು ಸೀಜ್ ಮಾಡಿದ್ದೇವೆ. ಬಾಕಿ ತೆರಿಗೆಯನ್ನು ವಸೂಲಿ ಮಾಡುವುದು ನಮ್ಮ ಉದ್ದೇಶವಾಗಿದೆ,” ಎಂದು ಅತ್ತಿಬೆಲೆ ಚೆಕ್ ಪೋಸ್ಟ್‌ನ ಹಿರಿಯ ಮೋಟಾರ್ ವಾಹನ ನಿರೀಕ್ಷಕ ರಂಜಿತ್ ಮಾಹಿತಿ ನೀಡಿದ್ದಾರೆ. ಸದ್ಯ, ಸೀಜ್ ಮಾಡಿದ ಬಸ್‌ಗಳ ದಾಖಲೆಗಳ ಪರಿಶೀಲನೆ ಮತ್ತು ಮಾಲೀಕರ ಮಾಹಿತಿಯನ್ನು ಕಚೇರಿಯಲ್ಲಿ ಕಲೆಹಾಕಲಾಗುತ್ತಿದೆ.
‘ಆಲ್ ಇಂಡಿಯಾ ಪರ್ಮಿಟ್’ ನೆಪ ಹೇಳಿದ ಮಾಲೀಕರು:
ಈ ಕುರಿತು ಪ್ರತಿಕ್ರಿಯಿಸಿದ ಬಸ್ ಮಾಲೀಕ ಮಹದೇವ್, “ಆಲ್ ಇಂಡಿಯಾ ಪರ್ಮಿಟ್ ತೆಗೆದುಕೊಂಡು ನಾವು ತಮಿಳುನಾಡಿನಿಂದ ಕರ್ನಾಟಕಕ್ಕೆ ಟೂರಿಸ್ಟ್ ಪ್ರಯಾಣಿಕರನ್ನು ಕರೆದುಕೊಂಡು ಬರುತ್ತಿದ್ದೇವು. ನಮಗೆ ಕರ್ನಾಟಕಕ್ಕೆ ಟ್ಯಾಕ್ಸ್ ಕಟ್ಟಬೇಕಾದ ಬಗ್ಗೆ ತಿಳಿದಿರಲಿಲ್ಲ. ಈಗ ₹1.80 ಲಕ್ಷ ಟ್ಯಾಕ್ಸ್ ಹಣ ಕಟ್ಟಿ ಬಸ್ ಅನ್ನು ಬಿಡಿಸಿಕೊಂಡು ಹೋಗುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದ ಹೊರರಾಜ್ಯಗಳ ಬಸ್‌ಗಳ ಅಕ್ರಮ ಓಡಾಟಕ್ಕೆ ಆರ್ಟಿಓ ಅಧಿಕಾರಿಗಳು ಕಡಿವಾಣ ಹಾಕಿದ್ದಾರೆ.

