Wednesday, October 29, 2025

ಪರೀಕ್ಷಾ ಫಲಿತಾಂಶದ ಒತ್ತಡ: ಭವಿಷ್ಯವನ್ನೇ ಮುಗಿಸಿದ ಎಂಬಿಬಿಎಸ್ ವಿದ್ಯಾರ್ಥಿನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ನಡೆದ ಕಾಲೇಜು ಪರೀಕ್ಷೆಯಲ್ಲಿ ಕಳಪೆ ಅಂಕ ಗಳಿಸಿದ್ದರಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ಕೋಟಾ ಸರ್ಕಾರಿ ವೈದ್ಯಕೀಯ ಕಾಲೇಜಿನ ತೃತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ರಾಜಸ್ಥಾನದ ದೌಸಾ ಮೂಲದ ಪ್ರಾಚಿ ಮೀನಾ (21) ಎಂದು ಗುರುತಿಸಲಾಗಿದೆ. ಕೋಟಾದ ಆಕಾಶವಾಣಿ ಕಾಲೋನಿಯಲ್ಲಿರುವ ತನ್ನ ನಿವಾಸದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪ್ರಾಚಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ.

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಾಚಿ ಮೀನಾರನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿನ ವೈದ್ಯರು ಆಕೆ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ನಯಾಪುರ ಸರ್ಕಲ್ ಇನ್ಸ್‌ಪೆಕ್ಟರ್ ವಿನೋದ್ ಕುಮಾರ್, ಮೃತ ಪ್ರಾಚಿ ಮೀನಾ ಅವರ ತಂದೆ ಆಲ್ ಇಂಡಿಯಾ ರೇಡಿಯೋದಲ್ಲಿ ಕೆಲಸ ಮಾಡುತ್ತಿದ್ದು, ಅವರು ತಮ್ಮ ಪೋಷಕರು ಮತ್ತು ಮೂವರು ಸಹೋದರರೊಂದಿಗೆ ಸರ್ಕಾರಿ ಕ್ವಾರ್ಟಸ್‌ನಲ್ಲಿ ವಾಸಿಸುತ್ತಿದ್ದರು.

ಪ್ರಾಥಮಿಕ ತನಿಖೆಯಲ್ಲಿ ಕಳಪೆ ಅಂಕಗಳ ಹಿನ್ನೆಲೆಯಲ್ಲಿ ಉಂಟಾದ ಖಿನ್ನತೆಯೇ ಈ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.

error: Content is protected !!