Wednesday, October 29, 2025

RAIN ALERT | ಮೊಂತಾ ಚಂಡಮಾರುತ ಎಫೆಕ್ಟ್: ಬೆಂಗಳೂರಿಗೂ ಕಾಡುತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಂಗಾಳಕೊಲ್ಲಿಯಲ್ಲಿ ಭುಗಿಲೆದ್ದಿರುವ ಮೊಂತಾ ಚಂಡಮಾರುತವು ರಭಸದಿಂದ ಆಂಧ್ರಪ್ರದೇಶ ಹಾಗೂ ಒರಿಸ್ಸಾ ಕರಾವಳಿ ಪ್ರದೇಶದತ್ತ ಧಾವಿಸುತ್ತಿದೆ. ಇದರ ಪರಿಣಾಮ ಬೆಂಗಳೂರು ಹಾಗೂ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ.

ಅಕ್ಟೋಬರ್ 26 ರಂದು ಬೆಳಿಗ್ಗೆ 8:30 ಕ್ಕೆ, ಈ ವಾತಾವರಣ ವ್ಯವಸ್ಥೆಯು ಪೋರ್ಟ್ ಬ್ಲೇರ್‌ನ ಪಶ್ಚಿಮಕ್ಕೆ ಸುಮಾರು 620 ಕಿ.ಮೀ., ಚೆನ್ನೈನ ಪೂರ್ವ-ಆಗ್ನೇಯಕ್ಕೆ 780 ಕಿ.ಮೀ., ಮತ್ತು ವಿಶಾಖಪಟ್ಟಣಂನ ದಕ್ಷಿಣ-ಆಗ್ನೇಯಕ್ಕೆ 830 ಕಿ.ಮೀ. ದೂರದಲ್ಲಿತ್ತು. ಇದು ಗಂಟೆಗೆ 6 ಕಿ.ಮೀ. ವೇಗದಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಿದೆ. ಈ ವ್ಯವಸ್ಥೆಯು ಸೋಮವಾರ (ಅಕ್ಟೋಬರ್ 27) ರ ವೇಳೆಗೆ ಚಂಡಮಾರುತವಾಗಿ ಮತ್ತು ಮಂಗಳವಾರ (ಅಕ್ಟೋಬರ್ 28) ರ ವೇಳೆಗೆ ತೀವ್ರ ಚಂಡಮಾರುತವಾಗಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ ಎಂದು ಸಂಸ್ಥೆ ತಿಳಿಸಿದೆ.

ಚಂಡಮಾರುತದ ಕೇಂದ್ರಬಿಂದುವು ಕರ್ನಾಟಕದಿಂದ ದೂರವಿದ್ದರೂ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಗಡಿ ಭಾಗಗಳಿಗೆ ಹತ್ತಿರದಲ್ಲಿರುವ ಕರ್ನಾಟಕದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಬೀಳುವ ಸಾಧ್ಯತೆಗಳು ದಟ್ಟವಾಗಿವೆ. ಉದಾಹರಣೆಗೆ, ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್ ಹೀಗೆ ಗಡಿಯಲ್ಲಿರುವ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

error: Content is protected !!