ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಪ್ರಸ್ತುತ ಗಾಯದಿಂದ ತೀವ್ರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯಲು ಹೋದಾಗ ಶ್ರೇಯಸ್ ಅಯ್ಯರ್ ಅವರ ಪಕ್ಕೆಲುಬಿಗೆ ಬಾಲ್ ತಾಗಿ ಆಂತರಿಕ ರಕ್ತಸ್ರಾವ ಉಂಟಾಗಿ ಅವರನ್ನು ಸಿಡ್ನಿಯ ಆಸ್ಪತ್ರೆಯ ಐಸಿಯುಗೆ ಸ್ಥಳಾಂತರಿಸಲಾಗಿದೆ.
ಅಯ್ಯರ್ ಅವರ ಪೋಷಕರಾದ ಸಂತೋಷ್ ಅಯ್ಯರ್ ಮತ್ತು ರೋಹಿಣಿ ಅಯ್ಯರ್ ತಮ್ಮ ಮಗನನ್ನು ನೋಡಲು ಆಸ್ಟ್ರೇಲಿಯಾಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅವರಿಗೆ ತುರ್ತು ವೀಸಾ ವ್ಯವಸ್ಥೆ ಮಾಡಿಸಲು ಸಹಕಾರ ನೀಡಿದ್ದು, ಹೀಗಾಗಿ ಪೋಷಕರು ಆತಂಕದಿಂದಲೇ ಆಸ್ಟ್ರೇಲಿಯಾಗೆ ಹೊರಟಿದ್ದಾರೆ.
ಮೂರನೇ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಅಲೆಕ್ಸ್ ಕ್ಯಾರಿಯ ಅದ್ಭುತ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ ವೇಳೆ, ಅವರ ಎಡ ಪಕ್ಕೆಲುಬಿಗೆ ಬಾಲ್ ತಾಗಿದ್ದು, ತಕ್ಷಣವೇ ನೋವು ಕಾಣಿಸಿಕೊಂಡಿತು. ಸ್ವಲ್ಪ ಸಮಯದ ನಂತರ ಅವರನ್ನು ಡ್ರೆಸ್ಸಿಂಗ್ ರೂಂನಿಂದ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಬಿಸಿಸಿಐ ಮೂಲಗಳ ಪ್ರಕಾರ, ಶ್ರೇಯಸ್ ಅಯ್ಯರ್ ಕಳೆದ ಎರಡು ದಿನಗಳಿಂದ ಐಸಿಯುನಲ್ಲಿದ್ದಾರೆ. ಅವರ ಆಂತರಿಕ ರಕ್ತಸ್ರಾವ ಗಂಭೀರವಾಗಿದ್ದು, ಸೋಂಕು ತಡೆಯಲು ಅವರನ್ನು ಎರಡು ರಿಂದ ಏಳು ದಿನಗಳವರೆಗೆ ನಿಗಾದಲ್ಲಿ ಇರಿಸಲಾಗುತ್ತದೆ. ವೈದ್ಯರು ಅವರ ಆರೋಗ್ಯವನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ.

