ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತೀರ್ಣ ಅಂಕವನ್ನು ಪ್ರತಿ ವಿಷಯಕ್ಕೆ 35% ರಿಂದ 33% ಕ್ಕೆ ಇಳಿಸುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದು, ಈ ನಿರ್ಧಾರವನ್ನು ಕೂಡಲೇ ಕೈಬಿಟ್ಟು ಹಿಂದಿನಂತೆಯೇ 35 ಅಂಕದ ಮಾನದಂಡವನ್ನೇ ಮುಂದುವರಿಸಲು ಒತ್ತಾಯಿಸಿದ್ದಾರೆ.
SSLC ಮತ್ತು ಪಿಯುಸಿ ವಿದ್ಯಾರ್ಥಿಗಳ ಪಾಸಿಂಗ್ ಮಾರ್ಕ್ಸ್ ಕಡಿಮೆ ಮಾಡುವ ವಿಚಾರದಿಂದ ಬೇಸರಗೊಂಡಿರುವ ಹೊರಟ್ಟಿ ಅವರು, ಸಚಿವರು ನೀಡಿರುವ ‘ಪ್ರತಿ ವಿಷಯದಲ್ಲಿ 33 ಅಂಕ ಪಡೆದರೆ ಉತ್ತೀರ್ಣಗೊಳಿಸುತ್ತೇವೆ’ ಎಂಬ ಇತ್ತೀಚಿನ ಹೇಳಿಕೆಯನ್ನು “ಬಹಳ ಖೇದಕರ ಸಂಗತಿ” ಎಂದು ಬಣ್ಣಿಸಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪರೀಕ್ಷೆಗಳು ಕೇವಲ ಅಂಕಗಳಿಕೆಯ ಸಾಧನವಲ್ಲ, ಅವು ಏಕಾಗ್ರತೆ, ಧೈರ್ಯ, ಜ್ಞಾಪಕ ಶಕ್ತಿ, ಕಲಿಕೆಯ ನೈಪುಣ್ಯತೆ ಮತ್ತು ವಿಷಯಗಳ ಮನನ ಮಾಡುವಂತಹ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ಶೇಕಡಾ 35ರಷ್ಟು ಅಂಕಗಳು ದೀರ್ಘಕಾಲದಿಂದ ಸಾಬೀತಾದ, ಸಮಂಜಸವಾದ ಮಾನದಂಡವಾಗಿದೆ. ಇಂತಹ ಮಾನದಂಡವನ್ನು ದಿಢೀರನೆ 33 ಅಂಕಗಳಿಗೆ ಕಡಿತಗೊಳಿಸುವುದು ಯಾವ ಕೋನದಿಂದಲೂ ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಪಾಸಿಂಗ್ ಮಾರ್ಕ್ಸ್ ಕಡಿತದಿಂದ ಉಂಟಾಗಬಹುದಾದ ಮತ್ತೊಂದು ಗಂಭೀರ ಪರಿಣಾಮವನ್ನು ಹೊರಟ್ಟಿ ಅವರು ಎತ್ತಿ ತೋರಿಸಿದ್ದಾರೆ. ಈ ನಿರ್ಧಾರವು ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಮನೋಭಾವಕ್ಕೆ ಪೆಟ್ಟು ನೀಡುವುದಲ್ಲದೆ, ಮಾನಸಿಕವಾಗಿ ದೃಢತೆಯ ಕೊರತೆ ಉಂಟಾಗಬಹುದು.
“ಮುಂದಿನ ದಿನಮಾನಗಳಲ್ಲಿ ಈ ನಿರ್ದಿಷ್ಟ ಬ್ಯಾಚಿನ ಅಭ್ಯರ್ಥಿಗಳನ್ನು ‘ಶೇಕಡಾ 33 ರ ಬ್ಯಾಚಿಗೆ ಸೇರಿವರು’ ಎಂಬಂತೆ ಇತರೆ ಬ್ಯಾಚಿನ ಅಭ್ಯರ್ಥಿಗಳೊಂದಿಗೆ ಗೇಲಿ ಮಾಡುವಂತಹ ಪ್ರಸಂಗ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಆ ಅಭ್ಯರ್ಥಿಗಳಿಗೆ ಕೀಳರಿಮೆಯ ಅನುಭವ ಉಂಟಾಗುವುದಕ್ಕೆ ಎಡೆ ಮಾಡಿದಂತಾಗುತ್ತದೆ.” ಕಲಿಕೆಯ ಗುಣಮಟ್ಟ ಮತ್ತು ಶಿಕ್ಷಕರು ಕಲಿಸುವ ಗುಣಮಟ್ಟದ ಮೇಲೆ ಇದು ಪರಿಣಾಮ ಬೀರುತ್ತದೆ, ಇದು ಸರಿಯಾದ ಕ್ರಮವಲ್ಲ ಎಂಬುದು ತಮ್ಮ ಭಾವನೆ ಎಂದು ಅವರು ತಿಳಿಸಿದ್ದಾರೆ.
ಹೊರಟ್ಟಿ ಅವರು ತಮ್ಮ ಪತ್ರದಲ್ಲಿ, ಪಾಸಿಂಗ್ ಮಾರ್ಕ್ಸ್ ಕಡಿತದ ನಿರ್ಧಾರವನ್ನು ಕೈಬಿಟ್ಟು, ಕನಿಷ್ಠ 35 ಅಂಕಗಳ ಮಾನದಂಡವನ್ನು ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆಯೂ ಅವರು ಆಗ್ರಹಿಸಿದ್ದಾರೆ.

