ಹೊಸದಿಗಂತ ಡಿಜಿಟಲ್ ಡೆಸ್ಕ್:
“ನಮ್ಮದು ಒಂದು ತಂಡ ಅಲ್ಲ… ಅದು ಆರ್ಮಿ!” ಎಂದು ಚಿತ್ರ ನಿರ್ಮಾಣದ ಆರಂಭದಲ್ಲೇ ಹೇಳಿದ್ದ ರಿಷಬ್ ಶೆಟ್ಟಿ, ಈಗ ಆ ಮಾತಿಗೆ ಅರ್ಥ ನೀಡುವ ಕೆಲಸ ಮಾಡಿದ್ದಾರೆ. ತಮ್ಮ ಹೊಸ ಚಿತ್ರದ ಯಶಸ್ಸಿನ ಹಿಂದೆ ದುಡಿದ ಡೈರೆಕ್ಷನ್ ಟೀಮ್‌ಗೆ ಮನಸಾರೆ ಧನ್ಯವಾದ ಹೇಳಿ, ತಮ್ಮ ಹೃದಯಭಾವವನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅವರು ತಮ್ಮ ತಂಡದೊಂದಿಗೆ ತೆಗೆದ ಫೋಟೋಗಳನ್ನೂ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, “ನಮ್ಮ ಪ್ರಯಾಣದ ಪ್ರತಿಯೊಂದು ಕ್ಷಣವೂ ಮರೆಯಲಾಗದ ಅನುಭವ” ಎಂದು ಬರೆದಿದ್ದಾರೆ.
ರಿಷಬ್ ಶೆಟ್ಟಿ ತಮ್ಮ ತಂಡದ ಬಗ್ಗೆ ಸದಾ ಗೌರವ ಮತ್ತು ನಂಬಿಕೆಯ ನೋಟವನ್ನು ಹೊಂದಿದ್ದಾರೆ. “ನಮ್ಮ ಚಿತ್ರಕ್ಕೆ ಸಾವಿರಾರು ಜನ ದುಡಿದಿದ್ದಾರೆ. ಇದು ಕೇವಲ ಸಿನಿಮಾ ಅಲ್ಲ, ಒಂದು ಆರ್ಮಿ ಕೆಲಸ ಮಾಡಿದ ಯೋಜನೆ,” ಎಂದು ಅವರು ಚಿತ್ರದ ಮೊದಲ ಪ್ರೆಸ್ ಮೀಟ್‌ನಲ್ಲೇ ಹೇಳಿದ್ದರು. ಈಗ, ಅದೇ ಆರ್ಮಿಗೆ ಥ್ಯಾಂಕ್ಸ್ ಹೇಳುವ ಮೂಲಕ ಅವರು ತಮ್ಮ ಮಾತನ್ನು ಕೃತಜ್ಞತೆಯಲ್ಲಿ ತೋರಿಸಿದ್ದಾರೆ.
ತಮ್ಮ ಮನದಾಳದ ಮಾತುಗಳ ಮೂಲಕ ರಿಷಬ್ ಶೆಟ್ಟಿ ಅವರು ತಮ್ಮ ತಂಡದ ಶ್ರಮ, ನಿಷ್ಠೆ ಮತ್ತು ಆತ್ಮಸಮರ್ಪಣೆಯನ್ನು ಕೊಂಡಾಡಿದ್ದಾರೆ. ಅವರು “ಕಷ್ಟಕರ ಹವಾಮಾನದಲ್ಲಿಯೂ ಕೂಡ ತಂಡ ಹಿಂಜರಿಯದೆ ಕೆಲಸ ಮಾಡಿದೆ, ಮೊದಲಿನ ಉತ್ಸಾಹದಲ್ಲಿಯೇ ಕೊನೆಯವರೆಗೂ ನಿಂತಿದೆ” ಎಂದು ಹೇಳಿದ್ದಾರೆ.
ಚಿತ್ರದ ಶೂಟಿಂಗ್ ಸಮಯದಲ್ಲಿ ಸೃಷ್ಟಿಯಾಗಿದ್ದ ಒಳ್ಳೆಯ ವೈಬ್‌ಗಳು, ಕೆಲಸದ ಪ್ರಾಮಾಣಿಕತೆ ಮತ್ತು ತಂಡದ ಒಗ್ಗಟ್ಟೇ ಈ ಯಶಸ್ಸಿನ ಗುಟ್ಟು ಎಂದು ಅವರು ಹೇಳಿದ್ದಾರೆ. ರಿಷಬ್ ಶೆಟ್ಟಿ ಅವರ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು “ಇದೇ ನಿಜವಾದ ನಾಯಕತ್ವ” ಎಂದು ಪ್ರಶಂಸಿಸುತ್ತಿದ್ದಾರೆ.

                                    