Saturday, November 1, 2025

ಕಳ್ಳತನದ ಕಳಂಕ, ಲಾಕಪ್‌ನಲ್ಲಿ ಹಿಂಸೆ: ಬೇಸತ್ತ ಯುವಕ ಆತ್ಮಹತ್ಯೆಗೆ ಯತ್ನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಸಮೀಪದ ಚಿಕ್ಕಬೆನ್ನೂರು ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಕಳ್ಳತನ ಪ್ರಕರಣವೊಂದರ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದ ಯುವಕನೊಬ್ಬ, ಪೊಲೀಸ್ ದೌರ್ಜನ್ಯದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆತ್ಮಹತ್ಯೆಗೆ ಪ್ರಯತ್ನಿಸಿದ ಯುವಕನನ್ನು ಕಿರಣ್ (24) ಎಂದು ಗುರುತಿಸಲಾಗಿದೆ. ಅಕ್ಟೋಬರ್ 27 ರಂದು ಕಳ್ಳತನ ಪ್ರಕರಣದ ವಿಚಾರಣೆ ನೆಪದಲ್ಲಿ ಕಿರಣ್‌ನನ್ನು ಸಂತೆಬೆನ್ನೂರು ಠಾಣೆಗೆ ಕರೆದೊಯ್ದಿದ್ದ ಪೊಲೀಸರು, ಆತನಿಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಠಾಣೆಯಲ್ಲಿ ಪೊಲೀಸರು ನೀಡಿದ ದೈಹಿಕ ಮತ್ತು ಮಾನಸಿಕ ಹಿಂಸೆಯಿಂದ ತೀವ್ರವಾಗಿ ನೊಂದ ಕಿರಣ್, ಮನೆಗೆ ಮರಳಿದ ನಂತರ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾನೆ.

ಯುವಕ ಆತ್ಮಹತ್ಯೆಗೆ ಯತ್ನಿಸಿದ ವಿಷಯ ತಿಳಿಯುತ್ತಿದ್ದಂತೆ ಆತನ ಕುಟುಂಬದವರು ಹಾಗೂ ಗ್ರಾಮಸ್ಥರು ಸಂತೆಬೆನ್ನೂರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕಳ್ಳತನ ಪ್ರಕರಣದ ವಿಚಾರಣೆ ಹೆಸರಿನಲ್ಲಿ ಪೊಲೀಸರು ನಮ್ಮ ಮಗನ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ಅವರ ಹಿಂಸೆಯೇ ಇವನ ಆತ್ಮಹತ್ಯೆ ಯತ್ನಕ್ಕೆ ಕಾರಣ. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.

ಸದ್ಯ, ಗಾಯಗೊಂಡಿರುವ ಕಿರಣ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಮುಂದುವರೆದಿದೆ. ಈ ಘಟನೆ ಸಂಬಂಧ ಸಾರ್ವಜನಿಕ ವಲಯದಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

error: Content is protected !!