ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ 1 ರಂದು ರಾಜ್ಯದಾದ್ಯಂತ ಕನ್ನಡ ರಾಜ್ಯೋತ್ಸವ ಭರ್ಜರಿಯಾಗಿ ಆಚರಿಸಲಾಗುತ್ತಿದೆ. ಈ ಹಬ್ಬದ ಸಂಭ್ರಮ ಸಾಮಾಜಿಕ ಜಾಲತಾಣಗಳಲ್ಲೂ ಮೊಳಗಿದೆ. ಹಲವಾರು ಸಿನಿತಾರೆಯರು ಕನ್ನಡದಲ್ಲಿ ಟ್ವೀಟ್ ಮಾಡಿ ತಮ್ಮ ಶುಭಾಶಯ ಹಂಚಿಕೊಂಡಿದ್ದಾರೆ. ಅದರಲ್ಲಿ ವಿಶೇಷವಾಗಿ ‘ರಾಕಿ ಭಾಯ್’ ಯಶ್ ಮತ್ತು ಅವರ ಪತ್ನಿ ರಾಧಿಕಾ ಪಂಡಿತ್ ಅವರ ಟ್ವೀಟ್‌ಗಳು ಅಭಿಮಾನಿಗಳ ಮನ ಗೆದ್ದುವು.
ಯಶ್ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ “ಎದೆ ತಟ್ಟಿ ಹೇಳು ನಾ ಭಾರತೀಯನೆಂದು, ಗರ್ವದಿಂದ ಬಾಳು ನಾ ಕನ್ನಡಿಗನೆಂದು, ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ, ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ” ಎಂದು ಬರೆದು ಕೆಂಪು ಮತ್ತು ಹಳದಿ ಹೃದಯದ ಎಮೋಜಿಗಳೊಂದಿಗೆ ಕನ್ನಡದ ಮೇಲೆ ತಮ್ಮ ಪ್ರೀತಿ ವ್ಯಕ್ತಪಡಿಸಿದರು.
ನಟಿ ರಾಧಿಕಾ ಪಂಡಿತ್ “ಕಲಿಯೋಕೆ ಕೋಟಿ ಭಾಷೆ, ಹೃದಯದಿಂದ ಆಡೋಕೆ ಒಂದೇ ಭಾಷೆ ಕನ್ನಡ” ಎಂದು ಬರೆದು ಕನ್ನಡಿಗರಿಗೆ ರಾಜ್ಯೋತ್ಸವದ ಹಾರೈಕೆ ಸಲ್ಲಿಸಿದರು.
ಇತ್ತೀಚೆಗೆ ಯಶ್ ತಮ್ಮ ಮಗನ ಹುಟ್ಟುಹಬ್ಬವನ್ನು ಕುಟುಂಬ ಸಮೇತರಾಗಿ ಆಚರಿಸಿದ್ದು, ಆ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕನ್ನಡ ರಾಜ್ಯೋತ್ಸವದ ಹಬ್ಬದಲ್ಲಿಯೂ ತಮ್ಮ ದೇಶಾಭಿಮಾನ ಮತ್ತು ನಾಡಪ್ರೇಮವನ್ನು ಹಂಚಿಕೊಂಡ ಯಶ್ ಮತ್ತು ರಾಧಿಕಾ ಪಂಡಿತ್ ಕನ್ನಡಿಗರ ಹೃದಯದಲ್ಲಿ ಮತ್ತೊಮ್ಮೆ ವಿಶೇಷ ಸ್ಥಾನ ಗಳಿಸಿದ್ದಾರೆ.

