ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯವರು ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಇಂತಹ ಕ್ರಿಯಾಶೀಲ ಯುವಕರಿಗೆ ಈಗ ರಾಜ್ಯ ಸರ್ಕಾರದಿಂದಲೇ ಬಂಪರ್ ಗಿಫ್ಟ್ ಘೋಷಣೆಯಾಗಿದೆ. ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇವಲ ಒಂದು ನಿಮಿಷದ ರೀಲ್ಸ್ ಮಾಡಿದರೆ ಬರೋಬ್ಬರಿ 50 ಸಾವಿರ ರೂಪಾಯಿ ನಗದು ಬಹುಮಾನ ಸಿಗಲಿದೆ!
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ಈ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ. 50 ವರ್ಷಗಳ ಸೇವೆಯನ್ನು ಸಂಭ್ರಮಿಸುವ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಬಹುಮಾನ ಯೋಜನೆ ಆರಂಭಿಸಲಾಗಿದೆ.
ಪರಿಸರ ಜಾಗೃತಿ ಕುರಿತಾದ, ಪ್ರೇರಣಾದಾಯಕ ಮತ್ತು ಮನ ಮುಟ್ಟುವ ಒಂದು ನಿಮಿಷದ ರೀಲ್ಸ್ ಯಾರು ಮಾಡಬಹುದು. ಮೊದಲ ಬಹುಮಾನವಾಗಿ 50,000 ನಗದು, ದ್ವಿತೀಯ ಬಹುಮಾನವಾಗಿ 25,000 ಮತ್ತು ತೃತೀಯ ಬಹುಮಾನವಾಗಿ 10,000 ರೂ. ನೀಡಲಾಗಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯೋಮಿತಿ ಇಲ್ಲ. ಯುವಕ, ಯುವತಿ ಅಥವಾ ಸಾಮಾನ್ಯ ನಾಗರಿಕರೂ ಸಹ ಪಾಲ್ಗೊಳ್ಳಬಹುದು.
ಭಾಗವಹಿಸುವವರು ತಮ್ಮ ರೀಲ್ಸ್ ವಿಡಿಯೋವನ್ನು ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು. ಆಯ್ಕೆ ಸಮಿತಿ ಪರಿಸರದ ಕುರಿತಾಗಿ ಸ್ಪಷ್ಟ ಸಂದೇಶ ನೀಡುವ, ಸೃಜನಾತ್ಮಕ ಹಾಗೂ ಪರಿಣಾಮಕಾರಿ ರೀಲ್ಸ್‌ಗಳನ್ನು ಆಯ್ಕೆಮಾಡಲಿದೆ.
ಆಯ್ಕೆಗೊಂಡ ಮೂರು ಅತ್ಯುತ್ತಮ ರೀಲ್ಸ್‌ಗಳಿಗೆ ನವೆಂಬರ್ 19ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತದೆ. ಆದ್ದರಿಂದ ಯುವ ಪ್ರತಿಭೆಗಳಿಗೆ ಇದು ತಮ್ಮ ಕಲೆ ಹಾಗೂ ಸಾಮಾಜಿಕ ಬದ್ಧತೆಯನ್ನು ತೋರಿಸಿಕೊಳ್ಳುವ ಅಪೂರ್ವ ವೇದಿಕೆ. ಇನ್ನೇಕೆ ತಡ? ನವೆಂಬರ್ 5ರೊಳಗೆ ನಿಮ್ಮ ಕ್ರಿಯಾಶೀಲ ರೀಲ್ಸ್ ಕಳುಹಿಸಿ – ಬಹುಮಾನ ನಿಮ್ಮದಾಗಿಸಿಕೊಳ್ಳಿ!

