ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಒಬ್ಬ ಆರೋಗ್ಯವಂತ ವ್ಯಕ್ತಿ ದಿನಕ್ಕೆ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಿದರೆ ಅದು ಸೂಕ್ತ. ಆದರೆ, ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್‌ವರೆಗೆ ಬಹು ಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ ಅವರು, ಇತ್ತೀಚೆಗೆ ಬರೋಬ್ಬರಿ 17 ಗಂಟೆಗಳ ಕಾಲ ಸತತವಾಗಿ ನಿದ್ರಿಸಿದ್ದ ವಿಚಿತ್ರ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.
‘ಗರ್ಲ್‌ಫ್ರೆಂಡ್’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ನಟ ದೀಕ್ಷಿತ್ ಶೆಟ್ಟಿ ಅವರೊಂದಿಗೆ ನಡೆದ ಕ್ಷಿಪ್ರ-ಪ್ರಶ್ನೋತ್ತರ (Rapid Fire) ಸುತ್ತಿನಲ್ಲಿ ರಶ್ಮಿಕಾ ಈ ಅಚ್ಚರಿಯ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಪ್ರಯಾಣ, ಸಿನಿಮಾ ಚಿತ್ರೀಕರಣ, ಪ್ರಚಾರ ಎಂದು ಸದಾ ಕೆಲಸದ ಒತ್ತಡದಲ್ಲಿರುವ ರಶ್ಮಿಕಾ, ದೇಹ ಮತ್ತು ಮನಸ್ಸು ಸಂಪೂರ್ಣ ಆಯಾಸಗೊಂಡಾಗ ಹೇಗೆ ಸಮಯ ಕಳೆಯುತ್ತಾರೆ ಎಂಬುದನ್ನು ವಿವರಿಸಿದ್ದಾರೆ.
“ಒಂದೊಂದು ದಿನ ಯಾವ ಕೆಲಸವನ್ನೂ ಮಾಡದೇ ವ್ಯರ್ಥವಾಗಿ ಸಮಯ ಕಳೆದಿರುವ ಉದಾಹರಣೆಗಳು ನನ್ನಲ್ಲಿವೆ. ನಾನು ಕೆಲವೊಮ್ಮೆ ಯಾವ ಟೆನ್ಶನ್ ಇಲ್ಲದೆ, ಏನೂ ಮಾಡದೇ ಸುಮ್ಮನೆ ಕೂತು ಆಕಾಶವನ್ನೋ, ಗೋಡೆಯನ್ನೋ ನೋಡುತ್ತಾ ಸಮಯ ಕಳೆದುಬಿಡುತ್ತೇನೆ. ಏನನ್ನೂ ಮಾಡದೇ ಸುಮ್ಮನೆ ಕೂರುವ ಆ ‘ಟ್ಯಾಲೆಂಟ್’ ನನಗೆ ಇದೆ,” ಎಂದು ರಶ್ಮಿಕಾ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ನಿದ್ರೆಯ ದಾಖಲೆಯನ್ನು ಬಹಿರಂಗಪಡಿಸಿ, “ಒಂದು ಸಲ ನಾನು ಸುದೀರ್ಘ 17 ಗಂಟೆಗಳ ಕಾಲ ನಿದ್ದೆ ಮಾಡಿರುವ ರೆಕಾರ್ಡ್ ಮಾಡಿದ್ದೇನೆ,” ಎಂದಿದ್ದಾರೆ. ರಶ್ಮಿಕಾ ಅವರ ಈ ಹೇಳಿಕೆಯಿಂದ ಕಿಂಚಿತ್ತೂ ಆಶ್ಚರ್ಯಪಡದ ನಟ ದೀಕ್ಷಿತ್ ಶೆಟ್ಟಿ ಕೂಡಲೇ, “ನಾನು ಕೂಡ 16 ಗಂಟೆ ಸತತವಾಗಿ ನಿದ್ದೆ ಮಾಡಿದ್ದೇನೆ,” ಎಂದು ಪ್ರತ್ಯುತ್ತರ ನೀಡಿದ್ದು, ಇಬ್ಬರು ತಾರೆಗಳು ನಗುವಿನೊಂದಿಗೆ ತಮ್ಮ ಕೆಲಸದ ಒತ್ತಡ ಮತ್ತು ವಿಶ್ರಾಂತಿಯ ಬಗೆಗಿನ ಮಾತುಕತೆಯನ್ನು ಮುಗಿಸಿದ್ದಾರೆ.

