Wednesday, November 5, 2025

ಮನೆಕೆಲಸದವರಿಂದ ನಾಯಿಯ ಬರ್ಬರ ಹತ್ಯೆ: ಮೃತದೇಹ ಹೊರತೆಗೆದು ಶವಪರೀಕ್ಷೆಗೆ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಕೆಲಸದ ಮಹಿಳೆಯೊಬ್ಬರು ನಾಲ್ಕು ವರ್ಷದ ನಾಯಿ ಮರಿಯನ್ನು ಲಿಫ್ಟ್‌ನಲ್ಲಿ ಬಟ್ಟೆ ಒಗೆದಂತೆ ನೆಲಕ್ಕಪ್ಪಳಿಸಿ ಕೊಲೆಗೈದಿರುವ ಹೇಯ ಕೃತ್ಯ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ. ನಾಯಿಯನ್ನು ಮಣ್ಣು ಮಾಡಲಾಗಿದ್ದು, ಇದೀಗ ಮೃತದೇಹ ಹೊರತೆಗೆದು ಶವಪರೀಕ್ಷೆ ಮಾಡಲಾಗುತ್ತದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕೃತ್ಯ ಎಸಗಿದ ತಮಿಳುನಾಡು ಮೂಲದ ಪುಷ್ಪಲತಾ (32) ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿಯು ಅ.31ರಂದು ನಾಯಿಯನ್ನು ಲಿಫ್ಟ್‌ನಲ್ಲಿ ಕೊಲೆಗೈದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕಣ್ಣೂರು ರಸ್ತೆಯ ಶೋಭಾ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಎಂಬಿಎ ವಿದ್ಯಾರ್ಥಿನಿ ರಾಶಿಕಾ ಅವರ ಮನೆಕೆಲಸಕ್ಕೆ ಪುಷ್ಪಲತಾ ಸೆಪ್ಟೆಂಬರ್‌ನಲ್ಲಿ ಸೇರಿಕೊಂಡಿದ್ದರು. ಪ್ರತಿ ತಿಂಗಳು 23 ಸಾವಿರ ರೂ. ಸಂಬಳವನ್ನು ಪುಷ್ಪಲತಾಗೆ ನಿಗದಿ ಮಾಡಲಾಗಿತ್ತು. ರಾಶಿಕಾ ಅವರು ವಿದೇಶಿ ತಳಿಯ ನಾಲ್ಕು ವರ್ಷದ ಎರಡು ನಾಯಿಮರಿಗಳನ್ನು ಸಾಕಿದ್ದು, ಅವುಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಪುಷ್ಪಲತಾಗೆ ವಹಿಸಲಾಗಿತ್ತು.

ಅ.31ರಂದು ಮಧ್ಯಾಹ್ನ ಎರಡೂ ನಾಯಿಗಳನ್ನು ಹೊರಗೆ ಕರೆದೊಯ್ದಿದ್ದ ಪುಷ್ಪಲತಾ, ಕೆಲ ಸಮಯದ ಬಳಿಕ ವಾಪಸ್‌ ಕರೆತಂದಿದ್ದರು. ವಾಪಸ್‌ ಬಂದಾಗ ‘ಗೂಸಿ’ ಹೆಸರಿನ ನಾಯಿ ಸತ್ತು ಹೋಗಿತ್ತು. ಮತ್ತೊಂದು ಬದುಕಿತ್ತು. ಮುದ್ದಿನ ನಾಯಿ ಸತ್ತಿರುವುದನ್ನು ಕಂಡು ದಿಗ್ಭ್ರಮೆಗೊಳಗಾದ ರಾಶಿಕಾ, ‘ಗೂಸಿ’ ಸಾವು ಹೇಗಾಯ್ತು ಎಂದು ಪ್ರಶ್ನಿಸಿದ್ದರು. ‘ಗೂಸಿ’ಯನ್ನು ಲಿಫ್ಟ್‌ನಲ್ಲಿ ಕರೆತರುವಾಗ ಜೋರಾಗಿ ಎಳೆದಾಗ ಸತ್ತು ಹೋಯ್ತು ಎಂದು ಪುಷ್ಪಲತಾ ಹೇಳಿದ್ದರು.

ಪುಷ್ಪಾ ಮಾತು ನಿಜ ಎಂದು ನಂಬಿದ ರಾಶಿಕಾ, ‘ಗೂಸಿ’ಯನ್ನು ಕೆಂಗೇರಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಮಾರನೇ ದಿನ ನಾಯಿ ಸಾವಿನ ಬಗ್ಗೆ ಅನುಮಾನ ಬಂದು ಸಿಸಿಟಿವಿ ಪರಿಶೀಲಿಸಿದಾಗ ಪುಷ್ಪಲತಾ, ಲಿಫ್ಟ್‌ನಲ್ಲಿ ಬಟ್ಟೆ ಒಗೆದಂತೆ ಗೂಸಿಯನ್ನು ನೆಲಕ್ಕಪ್ಪಳಿಸಿ ಕೊಂದಿರುವುದನ್ನು ಕಂಡಿದ್ದರು. ಜತೆಗೆ, ಸಿಸಿಟಿವಿ ಸಮೇತ ಪೊಲೀಸರಿಗೆ ದೂರು ನೀಡಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ, ಪ್ರಾಣಿಗಳ ಕೊಲೆ ಆರೋಪ ಪ್ರಕರಣದಲ್ಲಿಆರೋಪಿ ಪುಷ್ಪಲತಾರನ್ನು ಬಂಧಿಸಲಾಗಿದೆ. ‘ಹಲವು ಬಾರಿ ಎಳೆದರೂ ‘ಗೂಸಿ’ ಬರುತ್ತಿರಲಿಲ್ಲ. ಹೀಗಾಗಿ, ಕೋಪದಲ್ಲಿ ನಾಯಿಯನ್ನು ಮೇಲಕ್ಕೆತ್ತಿ ಒಗೆದಾಗ ತಕ್ಷಣ ಸತ್ತು ಹೋಯ್ತು’ ಎಂದು ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದಾರೆ.

error: Content is protected !!