ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಕ್ತಿ, ನಂಬಿಕೆ ಇದ್ದರೆ ಏನನ್ನಾದರೂ ಮಾಡಬಹುದು ಎನ್ನುವುದನ್ನು ಭಕ್ತನೊಬ್ಬ ಮಾಡಿ ತೋರಿಸಿದ್ದಾನೆ. 101 ಕೆಜಿಯ ಜೋಳದ ಚೀಲ ಹೊತ್ತು 575 ಮೆಟ್ಟಿಲುಗಳ ಅಂಜನಾದ್ರಿ ಬೆಟ್ಟವನ್ನು ಭಕ್ತ ಏರಿದ್ದಾನೆ.
ಕಡಿದಾದ ರಸ್ತೆ ಮತ್ತು ಮೆಟ್ಟಿಲು ಮಾರ್ಗ ಹೊಂದಿರುವ ತಾಲೂಕಿನ ಅಂಜನಾದ್ರಿಯ ಹನುಮಪ್ಪನ ಬೆಟ್ಟ ಹತ್ತುವುದು ಎಂದರೆ ಸಾಮಾನ್ಯ ಜನರಿಗೆ ಪ್ರಯಾಸವಾಗುತ್ತದೆ. ಅಂಥಹದ್ದರಲ್ಲಿ ಯುವಕನೊಬ್ಬ ಬರೋಬ್ಬರಿ 101 ಕೆ.ಜಿ ಭಾರದ ಜೋಳದ ಚೀಲ ಹೊತ್ತು ಬೆಟ್ಟ ಹತ್ತಿ ಗಮನ ಸೆಳೆದಿದ್ದಾನೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಬಳಿಯ ಬಿಸಿಲದಿನ್ನಿ ಎಂಬ ಪುಟ್ಟ ಗ್ರಾಮದ 19 ವರ್ಷ ವಯಸ್ಸಿನ ನವೀನ್ ಬರಮಗೌಡ, 101 ಕೆ.ಜಿ ಭಾರದ ಜೋಳದ ಚೀಲ ಹೊತ್ತು ಬೆಟ್ಟ ಹತ್ತಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.
575 ಮೆಟ್ಟಿಲುಗಳಿರುವ ಅಂಜನಾದ್ರಿ ಬೆಟ್ಟವನ್ನು ಜೋಳದ ಚೀಲ ಹೊತ್ತು ಬೆಟ್ಟ ಹತ್ತಲು ಈ ಯುವಕ ಕೇವಲ ಒಂದೂವರೆ ಗಂಟೆ ಸಮಯ ತೆಗೆದುಕೊಂಡಿದ್ದಾನೆ. ಮಾರ್ಗ ಮಧ್ಯೆ ಬಾಯಾರಿಕೆ ನೀಗಿಸಿಕೊಳ್ಳಲು ಎರಡು ಬಾರಿ ತಲಾ ಎರಡು ನಿಮಿಷ ವಿಶ್ರಾಂತಿ ಪಡೆದಿದ್ದರು. ಅತ್ಯಂತ ಪ್ರಯಾಸಪಟ್ಟು ಬೆಟ್ಟ ಏರಿದ ಬಳಿಕ ಯುವಕ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹನುಮಪ್ಪನ ಆಶೀರ್ವಾದ ಪಡೆದಿದ್ದಾನೆ. ನವೀನ್ ಸಾಹಸ ಮೆಚ್ಚಿದ ದೇಗುಲದ ವ್ಯವಸ್ಥಾಪನ ಮಂಡಳಿ ಆತನನ್ನು ಸನ್ಮಾನಿಸಿತು.

