ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಮದುವೆ ನಿಮಿತ್ತ ಕಾರು ಕೋರಿ ಬಿಜೆಪಿ ಸಂಸದರೊಬ್ಬರು ಪತ್ರ ಬರೆದಿದ್ದಾರೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಸಂಸದ ತೇಜಸ್ವಿ ಸೂರ್ಯ ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ತಾವು ಪತ್ರ ಬರೆದಿದ್ದು ಮದುವೆ ಕಾರಣಕ್ಕಲ್ಲ, ಬದಲಾಗಿ ತಮ್ಮ ಕ್ಷೇತ್ರದ ಕೆಲಸ ಕಾರ್ಯಗಳಿಗೆ ಓಡಾಡಲು ಹಳೆಯದಾದ ಮತ್ತು ಒಂದು ಲಕ್ಷ ಕಿ.ಮೀ ಓಡಿರುವ ಕಾರಿನ ಬದಲಿಗೆ ಹೊಸ ವಾಹನ ನೀಡುವಂತೆ ಕೋರಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, “ಸುಮಾರು ಒಂದು ವರ್ಷದ ಹಿಂದೆ ನಾನು ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದೆ. ಹಿಂದೆ ನನಗೆ ನೀಡಿದ್ದ ಸರ್ಕಾರಿ ವಾಹನ ಒಂದು ಲಕ್ಷ ಕಿಲೋಮೀಟರ್ ಓಡಿ ಮುಗಿದಿದ್ದು, ಕ್ಷೇತ್ರದ ಕೆಲಸಗಳಿಗೆ ಓಡಾಡಲು ಬೇರೆ ಕಾರಿನ ಅವಶ್ಯಕತೆ ಇದೆ ಎಂದು ಕೇಳಿದ್ದೆ. ಅದನ್ನು ಬಿಟ್ಟು, ನನಗೆ ಯಾರು ಹೆಣ್ಣು ಕೊಡುವುದಿಲ್ಲ, ಹಾಗಾಗಿ ಕಾರು ಕೊಡಿ ಎಂದು ಕೇಳಿಲ್ಲ,” ಎಂದು ಡಿಕೆಶಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು. “ಇದು ಎಲ್ಲಾ ಸಂಸದರಿಗೂ ನಿಯಮದ ಪ್ರಕಾರ ಸಿಗುವ ಸೌಲಭ್ಯ. ಈ ಪತ್ರವನ್ನು ನಾನೇ ಬಿಡುಗಡೆ ಮಾಡುತ್ತೇನೆಂದು ಡಿಕೆಶಿ ಹೇಳಿದ್ದರು, ಅದಕ್ಕಿಂತ ಮೊದಲು ನಾನೇ ಅದನ್ನು ಬಿಡುಗಡೆ ಮಾಡುತ್ತೇನೆ,” ಎಂದು ಸವಾಲೆಸೆದರು.
‘ವೈಯಕ್ತಿಕ ನಿಂದನೆಯ ಪ್ರಯತ್ನ’
‘ಕಾನೂನು ಪ್ರಕಾರ ಸಿಗುವ ಸೌಲಭ್ಯ’: ತಾಂತ್ರಿಕ ವಿಚಾರಗಳ ಬಗ್ಗೆ ಡಿಕೆಶಿ ಮಾತನಾಡುತ್ತಿಲ್ಲ. ವೈಯಕ್ತಿಕ ನಿಂದನೆ ಮಾಡುವ ಕೆಲಸ ಆಗುತ್ತಿದೆ. ಮದುವೆ ಆಗುತ್ತೇನೆ ಎಂದು ಕಾರು ಕೇಳಿಲ್ಲ. ಕಾರು ಪಡೆಯಲು ಮದುವೆ ಆಗಿರುವುದು ಅರ್ಹತೆ ಅಲ್ಲ. ಕಾನೂನು ಪ್ರಕಾರ ಅವಕಾಶ ಇರುವುದರಿಂದಲೇ ಕಾರು ಕೇಳಿದ್ದೆ. ಸಾಗರ್ ಖಂಡ್ರೆಯವರಂತಹ ಬ್ಯಾಚುಲರ್‌ಗಳಿಗೂ (ಅವಿವಾಹಿತರು) ಕಾರು ನೀಡಲಾಗಿದೆ ಎಂದು ತೇಜಸ್ವಿ ಸೂರ್ಯ ವಿವರಿಸಿದರು.

