ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿನ ಸುಮಾರು ಒಂದು ಕೋಟಿ ಆಸ್ತಿಗಳನ್ನು ಇ-ಸ್ವತ್ತು ವ್ಯವಸ್ಥೆಯಡಿ ತರುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇ-ಸ್ವತ್ತು ಅನುಷ್ಠಾನ ಮತ್ತು ಇತರೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವರು, ಈ ಯೋಜನೆ ಲಕ್ಷಾಂತರ ಮಂದಿ ಗ್ರಾಮೀಣ ನಿವಾಸಿಗಳ ಮನೆ ಮತ್ತು ನಿವೇಶನಗಳ ಸಕ್ರಮಕ್ಕೆ ನೆರವಾಗಲಿದೆ ಎಂದರು.
ಪಿಡಿಒಗಳಿಗೆ ವಿಶೇಷ ತರಬೇತಿ ವ್ಯವಸ್ಥೆ:
ಸಮರ್ಪಕ ಅನುಷ್ಠಾನಕ್ಕಾಗಿ, ಯೋಜನೆಯ ಸಂಬಂಧ ಹೊಸದಾಗಿ ಬಿಡುಗಡೆ ಮಾಡಿರುವ ನಿಯಮಾವಳಿಗಳನ್ನು ಗ್ರಾಮ ಪಂಚಾಯತಿ ಮಟ್ಟದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಮನವರಿಕೆ ಮಾಡಿಸಲು ಜಿಲ್ಲಾ ಮಟ್ಟದಲ್ಲಿ ಕೂಡಲೇ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಚಿವರು ತಿಳಿಸಿದರು.
ಸಾರ್ವಜನಿಕರು ಸುಲಲಿತವಾಗಿ ಮತ್ತು ಪಾರದರ್ಶಕವಾಗಿ ಇ-ಸ್ವತ್ತು ಪ್ರಯೋಜನ ಪಡೆಯಲು ಸಿಬ್ಬಂದಿಯನ್ನು ಸಜ್ಜುಗೊಳಿಸಬೇಕು ಎಂದು ಅವರು ಅಧಿಕಾರಿಗಳಿಗೆ ಆದೇಶಿಸಿದರು.
ಜನಪ್ರತಿನಿಧಿಗಳ ಸಹಕಾರಕ್ಕೆ ಒತ್ತು:
ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ವಿಶ್ವಾಸ ಗಳಿಸಿ, ಅವರ ನೆರವನ್ನು ಪಡೆದು ಈ ‘ಸ್ವತ್ತು ಆಂದೋಲನ’ ವನ್ನು ಯಶಸ್ವಿಗೊಳಿಸಬೇಕು ಎಂದು ಸಿಇಒಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. ರಾಜ್ಯದ ಲಕ್ಷಾಂತರ ಮಂದಿ ಈ ಯೋಜನೆಯ ಲಾಭಕ್ಕಾಗಿ ಕಾಯುತ್ತಿದ್ದು, ಅವರಿಗೆ ಯಾವುದೇ ಗೊಂದಲವಿಲ್ಲದೆ ಪ್ರಯೋಜನ ತಲುಪಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಸಚಿವರು ಒತ್ತಿ ಹೇಳಿದರು.

