Wednesday, November 5, 2025

ಕ್ರೀಡಾ ಲೋಕದ ಹೊಸ ಚಾಂಪಿಯನ್: ಐತಿಹಾಸಿಕ ಗೆಲುವಿನ ಬಳಿಕ ದಿಗ್ಗಜರ ನಿವೃತ್ತಿ ಛಾಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನವೆಂಬರ್ 2 ರ ರಾತ್ರಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸುವ ಮೂಲಕ ಭಾರತ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದು ಹೊಸ ಅಧ್ಯಾಯ ಬರೆದಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ನೇತೃತ್ವದಲ್ಲಿ, ಆರಂಭಿಕ ಮೂರು ಪಂದ್ಯಗಳಲ್ಲಿ ಸೋಲು ಕಂಡರೂ, ಅಸಾಧಾರಣ ಹೋರಾಟದ ಮೂಲಕ ತಂಡವು ತಿರುಗಿ ಬಿದ್ದು ಮೆಗಾ ಟೂರ್ನಿಯ ಟ್ರೋಫಿಯನ್ನು ಎತ್ತಿ ಹಿಡಿಯಿತು.

ಆದರೆ, ಈ ವಿಜಯೋತ್ಸವದ ಬೆನ್ನಲ್ಲೇ, ವಿಶ್ವ ಕ್ರಿಕೆಟ್‌ನ ಎಂಟು ಲೆಜೆಂಡರಿ ಆಟಗಾರ್ತಿಯರ ವೃತ್ತಿಜೀವನವು ಕೆಲವೇ ದಿನಗಳಲ್ಲಿ ಅಂತ್ಯವಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಈ ಪಟ್ಟಿಯಲ್ಲಿ ವಿಶ್ವಕಪ್ ಗೆದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಹೆಸರೂ ಸೇರಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಕೌರ್ ಸೇರಿದಂತೆ ದಿಗ್ಗಜರ ವಿದಾಯದ ಸುಳಿವು

ಪ್ರಸ್ತುತ 36 ವರ್ಷ ವಯಸ್ಸಿನ ಹರ್ಮನ್‌ಪ್ರೀತ್ ಕೌರ್ ಅವರಿಗೆ 2025ರ ವಿಶ್ವಕಪ್ ಕೊನೆಯ ಏಕದಿನ ವಿಶ್ವಕಪ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಏಕೆಂದರೆ ಮುಂದಿನ ವಿಶ್ವಕಪ್ ನಾಲ್ಕು ವರ್ಷಗಳ ನಂತರ, ಅಂದರೆ 2029 ರಲ್ಲಿ ನಡೆಯಲಿದ್ದು, ಅಲ್ಲಿಯವರೆಗೂ ಅವರು ಮುಂದುವರಿಯುವ ಸಾಧ್ಯತೆ ಕಡಿಮೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಸೆಮಿಫೈನಲ್‌ನಲ್ಲಿ ಸೋತ ಬಳಿಕ ಮಾತನಾಡಿದ್ದ ಆಸ್ಟ್ರೇಲಿಯಾದ ನಾಯಕಿ ಅಲಿಸಾ ಹೀಲಿ, ತಾವು ಮುಂದಿನ ವಿಶ್ವಕಪ್‌ನಲ್ಲಿ ಆಡುವುದಿಲ್ಲ ಎಂದು ಖಚಿತಪಡಿಸಿದ್ದಾರೆ. “ನಾನು ಮುಂದಿನ ವಿಶ್ವಕಪ್ ಅನ್ನು ಕುಳಿತು ನೋಡುತ್ತೇನೆ. ಮುಂದಿನ ವರ್ಷ ಟಿ20 ವಿಶ್ವಕಪ್ ಇದೆ, ಆದರೆ ನಮ್ಮ ಏಕದಿನ ಕ್ರಿಕೆಟ್ ತಂಡದಲ್ಲಿ ಬದಲಾವಣೆಗಳಾಗಲಿವೆ ಎಂದು ನಾನು ಭಾವಿಸುತ್ತೇನೆ,” ಎಂದು ಹೀಲಿ ಹೇಳಿದ್ದಾರೆ.

ಇದರ ಜೊತೆಗೆ, ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಲ್​ರೌಂಡರ್ ಮರಿಜಾನ್ನೆ ಕಪ್ ಅವರ ಮುಂದಿನ ವಿಶ್ವಕಪ್ ಭಾಗವಹಿಸುವಿಕೆಯೂ ಅನುಮಾನವಾಗಿದೆ. ಫೈನಲ್ ಸೋಲಿನ ನಂತರ ಟೀಂ ಇಂಡಿಯಾ ಆಟಗಾರ್ತಿಯರು ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದ್ದು, ಅವರ ವಿದಾಯದ ಸುಳಿವು ನೀಡಿದಂತಿತ್ತು.

ವಿದಾಯ ಹೇಳಬಹುದಾದ ಇತರ ಸ್ಟಾರ್ ಆಟಗಾರ್ತಿಯರು:

ಹರ್ಮನ್‌ಪ್ರೀತ್ ಕೌರ್ ಮತ್ತು ಅಲಿಸಾ ಹೀಲಿ ಹೊರತುಪಡಿಸಿ, ಈ ಕೆಳಗಿನ ಸ್ಟಾರ್ ಆಟಗಾರ್ತಿಯರ ಏಕದಿನ ವಿಶ್ವಕಪ್ ವೃತ್ತಿಜೀವನವೂ ಕೊನೆಯಾಗಬಹುದು:

ಎಲಿಸ್ ಪೆರ್ರಿ (ಆಸ್ಟ್ರೇಲಿಯಾ)

ಸೋಫಿ ಡಿವೈನ್ (ನ್ಯೂಜಿಲೆಂಡ್ ನಾಯಕಿ)

ಸುಜೀ ಬೇಟ್ಸ್ (ನ್ಯೂಜಿಲೆಂಡ್ ಆಲ್‌ರೌಂಡರ್)

ಇನೋಕಾ ರಣವೀರ (ಶ್ರೀಲಂಕಾ)

ಉದೇಶಿಕಾ ಪ್ರಬೋಧನಿ (ಶ್ರೀಲಂಕಾ)

ಈ ಯಾವ ಆಟಗಾರ್ತಿಯರು ತಮ್ಮ ನಿವೃತ್ತಿಯ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ನೀಡಿಲ್ಲವಾದರೂ, 2029ರ ವಿಶ್ವಕಪ್‌ಗೆ ಮುನ್ನ ಈ ದಿಗ್ಗಜರು ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆ ದಟ್ಟವಾಗಿದೆ.

error: Content is protected !!