ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ನಿಯಮವನ್ನು ಪಾಲಿಸದ ಪ್ಯಾನ್ ಕಾರ್ಡ್‌ಗಳು 2026ರ ಜನವರಿ 1 ರಿಂದ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳಲಿವೆ ಎಂದು ಸ್ಪಷ್ಟಪಡಿಸಲಾಗಿದೆ. ಪ್ಯಾನ್ ಇಲ್ಲದಿದ್ದರೆ ಬ್ಯಾಂಕಿಂಗ್ ಸೇರಿದಂತೆ ಹಲವು ಮಹತ್ವದ ಹಣಕಾಸು ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ನೀಡಿರುವ ಸೂಚನೆಯ ಪ್ರಕಾರ, 2025ರ ಅಕ್ಟೋಬರ್ 1 ರ ಮೊದಲು ಪ್ಯಾನ್ ಕಾರ್ಡ್ ಪಡೆದ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಲು 2025ರ ಡಿಸೆಂಬರ್ 31 ರವರೆಗೆ ಮಾತ್ರ ಕಾಲಾವಕಾಶ ನೀಡಲಾಗಿದೆ. ಈ ಗಡುವಿನೊಳಗೆ ಲಿಂಕ್ ಮಾಡದೇ ಹೋದಲ್ಲಿ, ಪ್ಯಾನ್ ಕಾರ್ಡ್ ಅನ್ನು ‘ಅನೂರ್ಜಿತ’ ಎಂದು ಪರಿಗಣಿಸಲಾಗುತ್ತದೆ.
ಪರ್ಮನೆಂಟ್ ಅಕೌಂಟ್ ನಂಬರ್ ಎಂಬುದು ಆದಾಯ ತೆರಿಗೆ ಇಲಾಖೆ ನೀಡುವ ಪ್ರಮುಖ ಗುರುತಿನ ಸಂಖ್ಯೆಯಾಗಿದ್ದು, ಇದನ್ನು ತೆರಿಗೆ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ದೊಡ್ಡ ಮೊತ್ತದ ನಗದು ಠೇವಣಿ ಮಾಡುವವರೆಗೆ ಅನೇಕ ಹಣಕಾಸು ವಹಿವಾಟುಗಳಿಗೆ ಪ್ಯಾನ್ ಕಡ್ಡಾಯ. ಆದ್ದರಿಂದ, ಇದು ವ್ಯಕ್ತಿಯ ಬಹುತೇಕ ಹಣಕಾಸು ಚಟುವಟಿಕೆಗಳ ಡಿಜಿಟಲ್ ದಾಖಲೆಯಾಗಿದೆ.
ತಡವಾದರೆ ದಂಡ ನಿಶ್ಚಿತ!
ಒಂದು ವೇಳೆ, ನೀವು ಡಿಸೆಂಬರ್ 31ರ ಗಡುವು ಮೀರಿದ ನಂತರ ಲಿಂಕ್ ಮಾಡಲು ಪ್ರಯತ್ನಿಸಿದರೆ, 1,000 ರೂಪಾಯಿಗಳ ದಂಡ ಪಾವತಿಸಬೇಕಾಗುತ್ತದೆ.
ಆಧಾರ್ ಮತ್ತು ಪ್ಯಾನ್ ಸಂಖ್ಯೆಗಳನ್ನು ಇಫೈಲಿಂಗ್ ವೆಬ್‌ಸೈಟ್‌ನಲ್ಲಿ ನಮೂದಿಸಿ, ‘Validate Aadhaar’ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ದಂಡದ ಅಗತ್ಯವಿದ್ದರೆ ಅದರ ಸೂಚನೆ ಸಿಗುತ್ತದೆ. ನಂತರ, ‘Continue to Pay through e-Pay Tax’ ಕ್ಲಿಕ್ ಮಾಡಿ ದಂಡವನ್ನು ಪಾವತಿಸಿ, ಪುನಃ ಇಫೈಲಿಂಗ್ ವೆಬ್‌ಸೈಟ್‌ಗೆ ಬಂದು ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

