Wednesday, November 5, 2025

ಪ್ರಯಾಣಿಕರ ಜೀವಕ್ಕೆ ಕುತ್ತು ತಂದ ಲಂಚಾವತಾರ: BMTC ಅಧಿಕಾರಿಗಳ ದುರ್ನಡತೆ, 9 ಮಂದಿ ಸಸ್ಪೆಂಡ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ಯಪಾನ ಮಾಡಿ ಕೆಲಸಕ್ಕೆ ಹಾಜರಾಗುತ್ತಿದ್ದ ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಲಂಚ ಪಡೆದು ಡ್ಯೂಟಿ ನೀಡುತ್ತಿದ್ದ ಪ್ರಕರಣ ಸಂಬಂಧ ಬಿಎಂಟಿಸಿ ಕಠಿಣ ಕ್ರಮ ಕೈಗೊಂಡಿದೆ. ಡಿಪೋ ಮ್ಯಾನೇಜರ್ ಸೇರಿದಂತೆ ಒಟ್ಟು 9 ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಈ ಕುರಿತು ಅಕ್ಟೋಬರ್ 13ರಂದು ವರದಿಯಾದ ಬೆನ್ನಲ್ಲೇ ಬಿಎಂಟಿಸಿ ಎಚ್ಚೆತ್ತುಕೊಂಡು ಈ ಕ್ರಮ ಜರುಗಿಸಿದೆ.

ಪ್ರಕರಣದ ವಿವರ:

ಕನ್ನಹಳ್ಳಿ (ಡಿಪೋ- 35) ಘಟಕದಲ್ಲಿ ಎಲೆಕ್ಟ್ರಿಕ್ ಬಸ್ ಚಾಲನೆಗೆ ಬರುವ ಕೆಲವು ಚಾಲಕರು ಮದ್ಯ ಸೇವಿಸಿ ಬರುತ್ತಿದ್ದರು. ನಿಯಮಗಳ ಪ್ರಕಾರ, ಡಿಪೋ ಅಧಿಕಾರಿಗಳು ಪ್ರತಿ ಚಾಲಕನನ್ನು ಪರೀಕ್ಷಿಸಿ, ಮದ್ಯಪಾನ ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ, ಘಟಕದ ಸುಮಾರು 150ಕ್ಕೂ ಹೆಚ್ಚು ಚಾಲಕರಿಂದ ಸಾವಿರಾರು ರೂಪಾಯಿ ಲಂಚ ಪಡೆದ ಅಧಿಕಾರಿಗಳು, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಬಸ್‌ಗಳನ್ನು ಓಡಿಸಲು ಅವಕಾಶ ನೀಡುತ್ತಿದ್ದರು. ಲಂಚದ ದುರಾಸೆಗೆ ಅಧಿಕಾರಿಗಳು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿತ್ತು.

ಅಮಾನತುಗೊಂಡ ಅಧಿಕಾರಿಗಳು:

ಬಿಎಂಟಿಸಿ ತಕ್ಷಣವೇ ಕಾರ್ಯಪ್ರವೃತ್ತವಾಗಿ ಕೆಳಕಂಡ 9 ಜನ ಅಧಿಕಾರಿಗಳನ್ನು ಅಮಾನತುಗೊಳಿಸಿದೆ:

ಘಟಕ ವ್ಯವಸ್ಥಾಪಕ – ಎಂ.ಜಿ ಕೃಷ್ಣ

ಸಂಚಾರ ನಿರೀಕ್ಷಕ – ಶ್ರೀನಿವಾಸ ಡಿ.

ಇ.ಎಸ್. ಅರುಣ್ ಕುಮಾರ್

ಕಿರಿಯ ಸಹಾಯಕಿ – ಪ್ರತಿಭಾ ಕೆ.ಎಸ್.

ಕ.ರಾ.ಸಾ.ಹವಲ್ದಾರ್ – ಮಂಜುನಾಥ ಎಂ.

ಕ.ರಾ.ಸಾ. ಪೇದೆಗಳು – ಮಂಜುನಾಥ ಎಸ್.ಜಿ., ಚೇತನಕುಮಾರ್, ಪುನೀತ್ ಕುಮಾರ್, ಮತ್ತು ಲಕ್ಷ್ಮೀ ಕೆ.

ಬೆಂಗಳೂರು ನಗರದಲ್ಲಿ ಈಗಾಗಲೇ ಬಿಎಂಟಿಸಿ ಬಸ್‌ಗಳು ಮೇಲಿಂದ ಮೇಲೆ ಅಪಘಾತಕ್ಕೀಡಾಗುತ್ತಿವೆ. ಅದರಲ್ಲೂ, ಎಲೆಕ್ಟ್ರಿಕ್ ಬಸ್‌ಗಳ ಅಪಘಾತಗಳಿಂದ ಈಗಾಗಲೇ 33 ಮಂದಿ ಪ್ರಾಣ ಕಳೆದುಕೊಂಡಿರುವ ಹಿನ್ನೆಲೆ ಇದೆ. ಇಂತಹ ದುರಂತಗಳ ತಡೆಗೆ ಸಂಸ್ಥೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವಾಗಲೇ, ಅಧಿಕಾರಿಗಳ ಈ ಬೇಜವಾಬ್ದಾರಿ ಮತ್ತು ಲಂಚದ ನಡೆ ಸಂಸ್ಥೆಯ ಕಾರ್ಯವೈಖರಿಗೆ ದೊಡ್ಡ ಕಪ್ಪು ಚುಕ್ಕೆಯಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ಕಡೆಗಣಿಸಿದ ಅಧಿಕಾರಿಗಳ ವಿರುದ್ಧ ಬಿಎಂಟಿಸಿ ಕಠಿಣ ಕ್ರಮಕ್ಕೆ ಮುಂದಾಗಿದೆ.

error: Content is protected !!