Wednesday, November 5, 2025

ನ.7ರಂದು ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ: ಮಾಳವಿಕ ಅವಿನಾಶ್

ಹೊಸ ದಿಗಂತ ಡಿಜಿಟಲ್ ಡೆಸ್ಕ್

ನವೆಂಬರ್ 7ರಂದು ದೇಶದೆಲ್ಲೆಡೆ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ, ವಂದೇ ಮಾತರಂನ ಸಂಭ್ರಮ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮತ್ತು ವಂದೇ ಮಾತರಂ 150ನೇ ವಾರ್ಷಿಕೋತ್ಸವದ ರಾಜ್ಯ ಸಂಚಾಲಕಿ ಮಾಳವಿಕ ಅವಿನಾಶ್ ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 7ರಂದು ರಾಜ್ಯ ಕಾರ್ಯಾಲಯದಲ್ಲಿ ಸುಮಾರು 300-400 ಜನರು ಸೇರಿ ಒಟ್ಟಾಗಿ ವಂದೇ ಮಾತರಂ ಸಾಮೂಹಿಕ ಗಾಯನ ಮಾಡಲಿದ್ದೇವೆ. ಎಲ್ಲರೂ ಇದರಲ್ಲಿ ಭಾಗವಹಿಸಬೇಕೆಂದು ಕೋರಿದರು.

ದೇಶಾದ್ಯಂತ ಎಲ್ಲ ಬಿಜೆಪಿ ಕಾರ್ಯಾಲಯಗಳಲ್ಲಿ ಸಾಮೂಹಿಕ ಗಾಯನ ನಡೆಯಲಿದೆ. ಪ್ರಧಾನಿಯವರೂ ಈ ಗಾಯನದಲ್ಲಿ ಸ್ವತಃ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪಕ್ಷವು 150 ಜಿಲ್ಲೆಗಳಲ್ಲಿ ಆಚರಣೆಗೆ ನಿರ್ಧರಿಸಿದ್ದು, ಕರ್ನಾಟಕದ ಬೆಂಗಳೂರು, ಮೈಸೂರು, ಚಿತ್ರದುರ್ಗ, ಬಾಗಲಕೋಟೆ, ಗದಗ, ಕಲಬುರ್ಗಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಂದೇ ಮಾತರಂ ಸಾಮೂಹಿಕ ಗಾಯನ ಇರುತ್ತದೆ ಎಂದು ತಿಳಿಸಿದರು.

1875ರಲ್ಲಿ ಬಂಕಿಂಚಂದ್ರ ಚಟ್ಟೋಪಾಧ್ಯಾಯರು ವಂದೇ ಮಾತರಂ ಗೀತೆ ರಚಿಸಿದ್ದಾರೆ. ಈ ಗೀತೆಗೆ ಇದೀಗ 150ರ ಸಂಭ್ರಮ. ಕೇಂದ್ರದ ಎನ್‍ಡಿಎ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶಾದ್ಯಂತ ವಂದೇ ಮಾತರಂ ಆಚರಣೆಗೆ ಸೂಚಿಸಿದೆ. ಸ್ವಾತಂತ್ರ್ಯ ಸಂಗ್ರಾಮದ ಮೂಲಮಂತ್ರ ಇದಾಗಿತ್ತು ಎಂದು ವಿವರಿಸಿದರು.

ಈ ಗೀತೆ ಹಾಡುವ ಮೂಲಕ ಆಚರಣೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ನಿರ್ಣಯಿಸಿದೆ. ನವೆಂಬರ್ 7ರಂದು ದೇಶದೆಲ್ಲೆಡೆ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ, ವಂದೇ ಮಾತರಂನ ಸಂಭ್ರಮ ನಡೆಯಲಿದೆ. 1896ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟಾಗೋರ್ ಅವರು ಈ ಹಾಡು ಜನಮನದಲ್ಲಿ ಇನ್ನೂ ಹೆಚ್ಚು ನಿಲ್ಲುವ ಹಾಗೆ ಹಾಡಿ ಅದಕ್ಕೆ ಹೆಚ್ಚಿನ ಪ್ರಚಾರ ದೊರಕಿತ್ತು ಎಂದು ಹೇಳಿದರು.

1950ರಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರು ಸಂಯುಕ್ತ ಅಸೆಂಬ್ಲಿಯಲ್ಲಿ ಜನಗಣಮನಕ್ಕೆ ಎಷ್ಟು ಗೌರವ ನೀಡಲಾಗುತ್ತದೋ ಅದೇ ರೀತಿ ರಾಷ್ಟ್ರದ ಹಾಡು ವಂದೇ ಮಾತರಂಗೆ ಗೌರವ ಸಲ್ಲಬೇಕೆಂದು ತಿಳಿಸಿದ್ದರು. 2019ರಲ್ಲಿ ಮಧ್ಯ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ವಂದೇ ಮಾತರಂ ಅನ್ನು ಸಚಿವಾಲಯದಲ್ಲಿ ಹಾಡಬಾರದೆಂದು ನಿಷೇಧ ಹೇರಿತ್ತು. ಇದು ಕಾಂಗ್ರೆಸ್ ರಾಜಕೀಯ; ನಮಗೆ ವಂದೇ ಮಾತರಂ ಅತ್ಯಂತ ಪೂಜನೀಯ ಎಂದು ಹೇಳಿದರು.

ಈ ವೇಳೆ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಮಂಜುಳ, ವಂದೇ ಮಾತರಂ 150ನೇ ವಾರ್ಷಿಕೋತ್ಸವದ ರಾಜ್ಯ ಸಹ-ಸಂಚಾಲಕಿ ಶ್ಯಾಮಲ ಕುಂದರ್ ಭಾಗವಹಿಸಿದ್ದರು.

error: Content is protected !!