ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವು ಬಹುತೇಕ ಅಂತ್ಯದತ್ತ ಸಾಗುತ್ತಿರುವಂತೆ ಕಾಣುತ್ತಿದೆ. ಫಿಟ್ನೆಸ್ ಕಾರಣಗಳಿಂದಾಗಿ ಕೆಲ ಸಮಯದಿಂದ ತಂಡದಿಂದ ಹೊರಗುಳಿದಿದ್ದ ಶಮಿ ಅವರನ್ನು ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೂ ಸಹ ಕಡೆಗಣಿಸಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಈ ನಿರ್ಧಾರವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಟೀಮ್ ಇಂಡಿಯಾದಲ್ಲಿ ಶಮಿ ಅವರ ಅದ್ಭುತ ಯುಗ ಮುಕ್ತಾಯವಾಗುತ್ತಿದೆಯೇ ಎಂಬ ಅನುಮಾನ ಮೂಡಿಸಿದೆ.
ನವೆಂಬರ್ 5 ರ ಬುಧವಾರದಂದು, ಬಿಸಿಸಿಐ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿತು. ಈ ತಂಡದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಮರಳಿ ಸ್ಥಾನ ಪಡೆದರೆ, ವೇಗಿ ಪ್ರಸಿದ್ಧ್ ಕೃಷ್ಣ ಬದಲಿಗೆ ಆಕಾಶ್ ದೀಪ್ ಅವರಿಗೆ ಅವಕಾಶ ನೀಡಲಾಗಿದೆ. ಆದರೆ, ಈ ಹಿರಿಯ ಹಾಗೂ ಅನುಭವಿ ವೇಗಿ ಶಮಿ ಅವರನ್ನು ಮತ್ತೊಮ್ಮೆ ನಿರ್ಲಕ್ಷಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಇತ್ತೀಚೆಗೆ, ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯಿಂದ ಶಮಿ ಅವರನ್ನು ಕೈಬಿಟ್ಟಿದ್ದ ಕುರಿತು ಮಾತನಾಡಿದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಅವರ ಫಿಟ್ನೆಸ್ ಸಮಸ್ಯೆಯನ್ನು ಪ್ರಮುಖ ಕಾರಣವಾಗಿ ಉಲ್ಲೇಖಿಸಿದ್ದರು. “ಶಮಿ ಸಂಪೂರ್ಣವಾಗಿ ಫಿಟ್ ಆಗಿದ್ದರೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡೂ ಪ್ರವಾಸಕ್ಕೂ ಆಯ್ಕೆ ಮಾಡುತ್ತಿದ್ದೆವು. ಅವರು ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ, ನಂತರ ಅವರನ್ನು ಪರಿಗಣಿಸಲಾಗುವುದು” ಎಂದು ಅಗರ್ಕರ್ ಹೇಳಿಕೆ ನೀಡಿದ್ದರು.
ಅದರಂತೆ, ಶಮಿ ಅವರು ಬಂಗಾಳ ಪರವಾಗಿ ಸತತ ಮೂರು ರಣಜಿ ಟ್ರೋಫಿ ಪಂದ್ಯಗಳಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈ ಮೂರು ಪಂದ್ಯಗಳಲ್ಲಿ ಅವರು 15 ವಿಕೆಟ್‌ಗಳನ್ನು ಕಬಳಿಸಿದ್ದು, ತಂಡವು ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶಮಿ ಎರಡು ಇನ್ನಿಂಗ್ಸ್‌ಗಳಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ ಮತ್ತು ಒಟ್ಟು 95 ಓವರ್‌ಗಳನ್ನು ಬೌಲಿಂಗ್ ಮಾಡುವ ಮೂಲಕ ದೈಹಿಕ ಸಾಮರ್ಥ್ಯವನ್ನೂ ಪ್ರದರ್ಶಿಸಿದ್ದಾರೆ.
ರಣಜಿ ಟ್ರೋಫಿಯಲ್ಲಿ ಶಮಿ ಅವರ ಈ ಅದ್ಭುತ ಪ್ರದರ್ಶನದ ನಂತರವೂ, ದಕ್ಷಿಣ ಆಫ್ರಿಕಾ ಸರಣಿಗೆ ಅವರು ಆಯ್ಕೆಯಾಗುವ ನಿರೀಕ್ಷೆ ಇತ್ತು. ಆದರೆ, ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮತ್ತು ತಂಡದ ಆಡಳಿತ ಮಂಡಳಿಯು ಮತ್ತೆ ಶಮಿ ಅವರನ್ನು ಕೈಬಿಟ್ಟಿದೆ. ಶಮಿ ಅವರನ್ನು ಆಯ್ಕೆ ಮಾಡದಿರಲು ಬಿಸಿಸಿಐ ಯಾವುದೇ ಅಧಿಕೃತ ಕಾರಣ ನೀಡಿಲ್ಲ.
ಹಿರಿಯ ವೇಗಿಯನ್ನು ಕೈಬಿಟ್ಟಿರುವ ಈ ನಡೆಯ ಹಿಂದೆ, ಯುವ ಆಟಗಾರರಿಗೆ ಅವಕಾಶ ನೀಡುವ ದೀರ್ಘಾವಧಿಯ ಯೋಜನೆಯ ಭಾಗವಾಗಿರಬಹುದು ಎಂದು ಕ್ರಿಕೆಟ್ ವಿಶ್ಲೇಷಕರು ಊಹಿಸಿದ್ದಾರೆ. ಅದೇನೇ ಇದ್ದರೂ, ಇದು ಮೊಹಮ್ಮದ್ ಶಮಿ ಅವರ ಅಂತರಾಷ್ಟ್ರೀಯ ವೃತ್ತಿಜೀವನದ ಮೇಲೆ ಬಹುದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿದೆ.

