Saturday, November 8, 2025

CINE | ನೀವೆಲ್ಲರೂ ಕಾಯ್ತಾಇರೋ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ರಿಲೀಸ್ ಆಗ್ತಿದೆ! ಹಿಟ್ ಆಗುತ್ತಾ ರಶ್ಮಿಕಾ-ದೀಕ್ಷಿತ್ ಶೆಟ್ಟಿ ಜೋಡಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಹೊಸ ಸಿನಿಮಾ “ದಿ ಗರ್ಲ್‌ಫ್ರೆಂಡ್” ಬಿಡುಗಡೆಗೆ ಸಜ್ಜಾಗಿದೆ. ಪ್ರತಿಭಾನ್ವಿತ ನಟ ದೀಕ್ಷಿತ್ ಶೆಟ್ಟಿ ಅವರ ಜೊತೆ ರಶ್ಮಿಕಾ ಈ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಗೀತಾ ಆರ್ಟ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ನಿರೂಪಿಸಿದ್ದಾರೆ.

ನಿರ್ದೇಶಕ ರಾಹುಲ್ ರವೀಂದ್ರನ್ ಈ ಚಿತ್ರವನ್ನು ತೀವ್ರವಾದ ಮತ್ತು ಭಾವನಾತ್ಮಕ ಪ್ರೇಮಕಥೆಯಾಗಿ ರೂಪಿಸಿದ್ದಾರೆ. ಧೀರಜ್ ಮೊಗಿಲಿನೇನಿ ಮತ್ತು ವಿದ್ಯಾ ಕೊಪ್ಪಿನೀಡಿ ನಿರ್ಮಾಪಕರಾಗಿದ್ದು, ಸಿನಿಮಾ ನವೀನ ದೃಷ್ಟಿಕೋನದಲ್ಲಿ ಯುವಜನರ ಭಾವನೆಗಳನ್ನು ತೋರಿಸುವ ಪ್ರಯತ್ನ ಮಾಡಿದೆ. ಈ ಚಿತ್ರ ನವೆಂಬರ್‌ 7ರಂದು ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದ್ದು, ನವೆಂಬರ್‌ 14ರಂದು ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಪ್ರೇಕ್ಷಕರ ಮುಂದೆ ಬರಲಿದೆ.

ಹೈದರಾಬಾದ್‌ನಲ್ಲಿ ನಡೆದ ಪೂರ್ವ-ಬಿಡುಗಡೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಅಲ್ಲು ಅರವಿಂದ್, “ನಾನು ಅನೇಕ ಚಿತ್ರಗಳನ್ನು ನಿರ್ಮಿಸಿದ್ದೇನೆ. ಆದರೆ ಈ ಸಿನಿಮಾ ನನಗೆ ಹಣಕ್ಕಿಂತ ಹೆಚ್ಚು ತೃಪ್ತಿಯನ್ನು ನೀಡಿದೆ. ಈ ಕಥೆ ಕೇಳಿದ ಕ್ಷಣದಿಂದಲೇ ಇದನ್ನು ಚಿತ್ರ ರೂಪದಲ್ಲಿ ಹೇಳಲೇಬೇಕು ಅನ್ನಿಸಿತು. ರಾಹುಲ್‌ನಂತಹ ಸಂವೇದನಾಶೀಲ ನಿರ್ದೇಶಕರು ಮಾತ್ರ ಇಂತಹ ಚಿತ್ರಗಳನ್ನು ಮಾಡಬಲ್ಲರು,” ಎಂದರು.

“ಈ ಸಿನಿಮಾ ಎಷ್ಟು ಹಾಡುಗಳಿವೆ ಅಥವಾ ಎಷ್ಟು ಹಾಸ್ಯವಿದೆ ಎನ್ನುವುದನ್ನು ಅಳೆಯುವ ಚಿತ್ರವಲ್ಲ. ಇದು ಪ್ರತಿ ಕುಟುಂಬದ ಹೃದಯವನ್ನು ಮುಟ್ಟುವ ಕಥೆ. ಪ್ರೇಕ್ಷಕರು ಈ ಚಿತ್ರ ನೋಡಿ ರಾತ್ರಿ ನಿದ್ರೆ ಮಾಡಲಾಗದು, ಅದು ಅವರ ಮನಸ್ಸಿನಲ್ಲಿ ಕಾಡುತ್ತದೆ,” ಎಂದು ಭಾವನಾತ್ಮಕವಾಗಿ ಹೇಳಿದರು.

error: Content is protected !!