ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿಗಳು ಯುದ್ಧ ಬಂದಾಗ ಶಸ್ತ್ರಾಭ್ಯಾಸ ಮಾಡುವ ಬದಲು ಕಬ್ಬು ಬೆಳೆಗಾರರ ಕ್ಷಮೆ ಕೇಳಿ ಎಂದು ಸಿದ್ದರಾಮಯ್ಯರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿ, ಶಾಸಕ ಯಶವಂತರಾಯಗೌಡ ಪಾಟೀಲರು ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಮಾತನಾಡಿ, ಅವರು ಕಬ್ಬು ಬೆಳೆಗಾರರೇ ಅಲ್ಲ ಎಂದಿದ್ದಾರೆ. ಅವರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.
ಕಬ್ಬು ಬೆಳೆಗಾರರಿಗೆ ಅವಮಾನ ಮಾಡಿದ ಅವರು ತಕ್ಷಣ ಕ್ಷಮೆ ಯಾಚಿಸಬೇಕು. ಮುಖ್ಯಮಂತ್ರಿಗಳು ಯುದ್ಧ ಬಂದಾಗ ಶಸ್ತ್ರಾಭ್ಯಾಸ ಮಾಡುವ ಬದಲಾಗಿ ಕಬ್ಬು ಅರೆಯುವ ಒಂದು ಅಥವಾ ಎರಡು ತಿಂಗಳ ಮೊದಲೇ ಈ ಸಂಧಾನ ಸಭೆ ಕರೆಯಬೇಕಿತ್ತು. ತಡ ಆಗಿದೆ. ತಡ ಆಗಿದ್ದರೂ ಪರವಾಗಿಲ್ಲ. ರೈತರ ತಾಳ್ಮೆ ಪರೀಕ್ಷಿಸದಿರಿ. ಪ್ರಧಾನಿಯವರಿಗೆ ಪತ್ರ ಬರೆಯವುದಾಗಿ ಕೈಕಟ್ಟಿ ಸುಮ್ಮನೆ ಕುಳಿತಿರದಿರಿ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಕುರ್ಚಿಗೆ ಎಷ್ಟು ತಲೆ ಕೆಡಿಸಿಕೊಂಡಿದ್ದೀರೋ ಅದರ ಶೇ.10 ರಷ್ಟನ್ನು ಕಬ್ಬು ಬೆಳೆಗಾರರ ಬಗ್ಗೆ ತಲೆ ಕೆಡಿಸಿಕೊಳ್ಳಿ. ಆಗ ರೈತರು ನಿಮ್ಮನ್ನು ಪೂಜೆ ಮಾಡುತ್ತಾರೆ. ನನಗೆ ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಖಂಡಿತ ಇಲ್ಲ ಎಂದು ನುಡಿದರು. ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡುವುದಷ್ಟೇ ನಮ್ಮ ಬದ್ಧತೆ ಎಂದರು.

