Sunday, November 9, 2025

ಪಡಿತರ ವ್ಯವಸ್ಥೆಯಡಿ ರಾಗಿ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಲೆತ್ನಿಸಿದ್ದ ವ್ಯಕ್ತಿ ಅರೆಸ್ಟ್‌

ಹೊಸದಿಗಂತ ವರದಿ ದಾವಣಗೆರೆ:

ಪಡಿತರ ವ್ಯವಸ್ಥೆಯಡಿ ಜನರಿಗೆ ಪೂರೈಸಿದ್ದ ರಾಗಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ದಾವಣಗೆರೆ ಎಪಿಎಂಸಿಯಲ್ಲಿ ಮಾರಾಟ ಮಾಡಲೆಂದು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು, 1.13 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ 3,770 ಕೆ.ಜಿ ಪಡಿತರ ರಾಗಿ ಹಾಗೂ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಹರಿಹರ ತಾಲೂಕು ಮಲೆಬೆನ್ನೂರು ವಾಸಿ, ಗುಜರಿ ವ್ಯಾಪಾರಿ ಸೈಯದ್ ಇರ್ಷಾದ್ ಅಲಿ(28 ವರ್ಷ) ಬಂಧಿತ ಆರೋಪಿ. ಪಡಿತರ ವ್ಯವಸ್ಥೆಯಡಿ ಪೂರೈಸಿದ್ದ ರಾಗಿಯನ್ನು ಮಲೆಬೆನ್ನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಜನರಿಂದ ಕಡಿಮೆ ಬೆಲೆಗೆ ಖರೀದಿಸಿ, ಅದನ್ನು ದಾವಣಗೆರೆ ಎಪಿಎಂಸಿಯಲ್ಲಿ ಮಾರಾಟ ಮಾಡಲೆಂದು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಈತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ನಗರದ ಮೋತಿ ವೀರಪ್ಪ ಕಾಲೇಜು ಪಕ್ಕದ ರಸ್ತೆಯಲ್ಲಿ ಪಡಿತರ ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡು ಮಾರಾಟಕ್ಕೆ ಒಯ್ಯಲು ಗೂಡ್ಸ್ ವಾಹನ ನಿಲ್ಲಿಸಿಕೊಂಡ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಎಸ್ಪಿ ಕಚೇರಿಯ ಪಿಎಸೈ ಸಾಗರ್ ಅತ್ತರವಾಲಾ, ಬಡಾವಣೆ ಠಾಣೆ ಪಿಎಸೈ ಅನ್ನಪೂರ್ಣಮ್ಮ, ಆಹಾರ ನಿರೀಕ್ಷಕ ಟಿ.ಮಂಜುನಾಥ ಹಾಗೂ ಸಿಬ್ಬಂದಿ ದಾಳಿ ಮಾಡಿ, ವಾಹನ ತಪಾಸಣೆ ಮಾಡಿದಾಗ ರಾಗಿ ಮೂಟೆಗಳು ಕಂಡು ಬಂದವು. ಕಾನೂನುಬಾಹಿರವಾಗಿ ಅನ್ನಭಾಗ್ಯ ಯೋಜನೆ ಪಡಿತರ ವ್ಯವಸ್ಥೆಯ ರಾಗಿಯನ್ನು ಅನಧಿಕೃತವಾಗಿ ಸಂಗ್ರಹಿಸಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.

error: Content is protected !!