ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA)ದ ಬಗ್ಗೆ ಮಾತು ಬಂದರೆ ಪ್ರಯಾಣಿಕರ ಮನಸ್ಸಿನಲ್ಲಿ ಮೊದಲು ನೆನಪಾಗುವುದು ಟ್ರಾಫಿಕ್ ಮತ್ತು ದೂರದ ಪ್ರಯಾಣ. ನಗರದಿಂದ ಬಹುತೇಕ 40 ಕಿಲೋಮೀಟರ್ ದೂರದಲ್ಲಿರುವ ಈ ವಿಮಾನ ನಿಲ್ದಾಣ ತಲುಪಲು ಪ್ರಯಾಣಿಕರು ಕೆಲವೊಮ್ಮೆ ವಿಮಾನ ಹಾರಾಟಕ್ಕಿಂತ ಹೆಚ್ಚು ಸಮಯ ರಸ್ತೆಯಲ್ಲಿ ಕಳೆಯಬೇಕಾಗುತ್ತದೆ. ಇದೀಗ, ವಿಮಾನ ನಿಲ್ದಾಣದ ಉಬರ್ ಪಿಕ್‌ಅಪ್ ಪಾಯಿಂಟ್‌ನಲ್ಲಿ ಉಂಟಾದ ಜನದಟ್ಟಣೆ ಕುರಿತಾಗಿ ವಿಡಿಯೋ ವೈರಲ್ ಆಗಿದ್ದು, ಈ ಸಮಸ್ಯೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಎಕ್ಸ್ ಬಳಕೆದಾರರಾದ ದಿಶಾ ಸೈನಿ ತಮ್ಮ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಉಬರ್ ಪಿಕ್‌ಅಪ್ ಪಾಯಿಂಟ್‌ನಲ್ಲಿ ನೂರಾರು ಪ್ರಯಾಣಿಕರು ಬ್ಯಾಗ್‌ಗಳೊಂದಿಗೆ ಸಾಲಿನಲ್ಲಿ ನಿಂತಿರುವುದನ್ನು ಕಾಣಬಹುದು. ಅವರು ಪೋಸ್ಟ್‌ನಲ್ಲಿ “ಒಂದು ಕ್ಯಾಬ್ ಪಡೆಯಲು ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ಕಾಯಬೇಕಾಗುತ್ತೆ” ಎಂದು ಬರೆದುಕೊಂಡಿದ್ದಾರೆ.
ಬಹುತೇಕ ಬಳಕೆದಾರರು ಕಳೆದ ಕೆಲವು ತಿಂಗಳಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದ ಟ್ರಾಫಿಕ್ ಹಾಗೂ ರೈಡ್ ಸೌಲಭ್ಯಗಳು ಹದಗೆಟ್ಟಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದು “ಅದಕ್ಕಾಗಿಯೇ ನಾನು ಯಾವಾಗಲೂ ಮಧ್ಯಾಹ್ನ ಅಥವಾ ಸಂಜೆ ಸಮಯದಲ್ಲಿ ಲ್ಯಾಂಡ್ ಆಗಲು ಪ್ರಯತ್ನಿಸುತ್ತೇನೆ. ಇಲ್ಲವಾದರೆ ಪಾರ್ಕಿಂಗ್ ಲಾಟ್‌ನಲ್ಲೇ ನಾಲ್ಕು ಗಂಟೆ ಸಿಲುಕಿಕೊಳ್ಳಬೇಕಾಗುತ್ತದೆ.” ಎಂದು ಹೇಳಿದ್ದಾರೆ.
ಮತ್ತೊಬ್ಬರು ವ್ಯಂಗ್ಯವಾಗಿ, “ಈಗ ಬೆಂಗಳೂರನ್ನು ಓವರ್‌ರೇಟೆಡ್ ಅಂದ್ರೆ ತಪ್ಪಾಗೋದಿಲ್ಲ! ಕಂಪನಿಗಳು ನಿಜಕ್ಕೂ ವುರ್ಕ್ ಫ್ರಂ ಹೋಮ್ ಆಯ್ಕೆಯನ್ನು ಕೊಡಬೇಕು. ಆಗ ಜನರು ತಮ್ಮ ಊರಲ್ಲೇ ಉಳಿದು ಕೆಲಸ ಮಾಡಬಹುದು” ಎಂದು ಹೇಳಿದ್ದಾರೆ.

