ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣ ಸಂಬಂಧ, ಗೃಹ ಸಚಿವ ಜಿ. ಪರಮೇಶ್ವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೈದಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಅವರು ಕೋಪಗೊಂಡು, “ಇದು ನಾನ್‌ಸೆನ್ಸ್, ಇದನ್ನೆಲ್ಲ ಸಹಿಸಲು ಸಾಧ್ಯವಿಲ್ಲ,” ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್, “ನಟ ದರ್ಶನ್ ಅವರು ದಿಂಬು, ಹಾಸಿಗೆ, ವಿಶೇಷ ಸೌಲಭ್ಯಕ್ಕಾಗಿ ಮನವಿ ಮಾಡುತ್ತಾರೆ. ಆದರೆ ಈ ಕೈದಿಗಳಿಗೆ ಎಲ್ಲವೂ ಸಿಗುತ್ತದೆ ಇದು ಕ್ರಮ ತಪ್ಪಿದ ಉದಾಹರಣೆ. ಇಂತಹ ಘಟನೆಗಳು ಪದೇಪದೇ ನಡೆಯುತ್ತಿವೆ. ಹಿಂದೆಯೂ ಇದೇ ರೀತಿಯ ಸಂದರ್ಭಗಳಲ್ಲಿ ಕ್ರಮ ತೆಗೆದುಕೊಂಡಿದ್ದೆವು,” ಎಂದು ಹೇಳಿದರು.
ಅವರು ಮುಂದುವರಿದು, “ಜೈಲು ಉಸ್ತುವಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿನ್ನೆ ನಾನು ಡಿಜಿಪಿ ದಯಾನಂದ್ ಅವರ ಜೊತೆ ಮಾತನಾಡಿದ್ದೇನೆ. ಅವರು ವರದಿ ಸಲ್ಲಿಸಬೇಕೆಂದು ಸೂಚಿಸಿದ್ದೇನೆ. ವರದಿ ಸಮಾಧಾನಕರವಾಗಿರದಿದ್ದರೆ, ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗುವುದು,” ಎಂದು ಸ್ಪಷ್ಟಪಡಿಸಿದರು.
ಪರಮೇಶ್ವರ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, “ಈ ರೀತಿಯ ಸೌಲಭ್ಯಗಳು ಯಾವುದೇ ಕೈದಿಗಳಿಗೆ ಸಿಗಬಾರದು. ಹಳೆಯ ವಿಡಿಯೋ ಆಗಿರಲಿ, ಹೊಸದು ಆಗಿರಲಿ ಇಂತಹ ಘಟನೆಗಳು ಮತ್ತೆ ನಡೆಯಬಾರದು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ,” ಎಂದು ಹೇಳಿದರು.

