Monday, November 10, 2025

CINE | ಡಿಸ್ನಿ ಜಗತ್ತಿಗೆ ಕಾಲಿಟ್ಟ ಬಾಲಿವುಡ್ ಸ್ಟಾರ್ ನಟಿ: ‘ಝೂಟೋಪಿಯಾ 2’ನಲ್ಲಿ ಶ್ರದ್ಧಾ ಕಪೂರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಮತ್ತು ಹಾಲಿವುಡ್ ನಡುವೆ ಹೊಸ ಸಂಸ್ಕೃತಿ ವಿನಿಮಯ ಆರಂಭವಾಗಿದೆ. ಈಗ ತಾರೆಯರು ತಮ್ಮ ಧ್ವನಿಯ ಮೂಲಕ ಅನಿಮೇಟೆಡ್ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ. ಈ ಪೈಕಿ ಇದೀಗ ಬಾಲಿವುಡ್‌ನ ಮುದ್ದಾದ ತಾರೆ ಶ್ರದ್ಧಾ ಕಪೂರ್ ಕೂಡ ಡಿಸ್ನಿ ಜಗತ್ತಿಗೆ ಕಾಲಿಟ್ಟಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಪ್ರೀತಿಗೆ ಪಾತ್ರವಾದ ಡಿಸ್ನಿಯ ಐಕಾನಿಕ್ ಪಾತ್ರ ‘ಜೂಡಿ ಹಾಪ್ಸ್’ಗೆ ಶ್ರದ್ಧಾ ತಮ್ಮ ಧ್ವನಿ ನೀಡುತ್ತಿದ್ದಾರೆ.

ಡಿಸ್ನಿ ಸ್ಟುಡಿಯೋಸ್ ಇಂಡಿಯಾ ತನ್ನ ಅಧಿಕೃತ X ಖಾತೆಯ ಮೂಲಕ ಈ ಘೋಷಣೆ ಮಾಡಿದ್ದು, ಹಿಂದಿಯಲ್ಲಿ ಬಿಡುಗಡೆಯಾಗಲಿರುವ ‘ಝೂಟೋಪಿಯಾ 2’ ಚಿತ್ರದಲ್ಲಿ ಶ್ರದ್ಧಾ ಕಪೂರ್ ಜೂಡಿ ಹಾಪ್ಸ್ ಪಾತ್ರಕ್ಕೆ ಧ್ವನಿ ನೀಡಲಿದ್ದಾರೆ. ಈ ಘೋಷಣೆಯೊಂದಿಗೆ, ಅನಿಮೇಟೆಡ್ ಚಿತ್ರ ಪ್ರೇಮಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ಡಿಸ್ನಿ ಇಂಡಿಯಾ ಪ್ರಕಟಿಸಿರುವ ಪೋಸ್ಟರ್‌ನಲ್ಲಿ ಶ್ರದ್ಧಾ ಮತ್ತು ಜೂಡಿ ಹಾಪ್ಸ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

“ಜೂಡಿ ಧೈರ್ಯಶಾಲಿ, ಕುತೂಹಲಭರಿತ ಮತ್ತು ಸದಾ ನಗುವುಳ್ಳ ಪಾತ್ರ. ಆಕೆಗೆ ಧ್ವನಿ ನೀಡುವುದು ನನಗೆ ತುಂಬಾ ಸಂತೋಷ,” ಎಂದು ಶ್ರದ್ಧಾ ಹೇಳಿದ್ದಾರೆ. ನವೆಂಬರ್ 28 ರಂದು ಚಿತ್ರ ಬಿಡುಗಡೆಯಾಗಲಿದ್ದು, ಡಿಸ್ನಿ ಅಭಿಮಾನಿಗಳಿಗೆ ವಿಶೇಷ ಅಚ್ಚರಿಯೊಂದನ್ನು ನೀಡಲು ಸಿದ್ಧವಾಗಿದೆ.

ಅಭಿಮಾನಿಗಳು ಶ್ರದ್ಧಾ ಕಪೂರ್ ಅವರ ಧ್ವನಿ ಈ ಪಾತ್ರಕ್ಕೆ ಅತ್ಯಂತ ಸೂಕ್ತ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೂಡಿ ಹಾಪ್ಸ್‌ನ ಉತ್ಸಾಹ, ಸಕಾರಾತ್ಮಕ ಧೋರಣೆ ಮತ್ತು ಧೈರ್ಯವನ್ನು ಶ್ರದ್ಧಾ ಅವರ ಧ್ವನಿಯ ಸೊಗಸು ಸಂಪೂರ್ಣವಾಗಿ ತೋರಿಸಬಲ್ಲದು ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಝೂಟೋಪಿಯಾ ಚಿತ್ರದ ಮೊದಲ ಭಾಗವು ಆಸ್ಕರ್‌ ಪ್ರಶಸ್ತಿಯನ್ನು ಗೆದ್ದಿತ್ತು ಮತ್ತು ವಿಶ್ವಾದ್ಯಂತ ಭಾರೀ ಯಶಸ್ಸು ಕಂಡಿತ್ತು. ಇದೀಗ ಅದರ ಸೀಕ್ವೆಲ್‌ನಲ್ಲಿ, ಬನ್ನಿ ಕಾಪ್ ಜೂಡಿ ಹಾಪ್ಸ್ ಮತ್ತು ಕುತಂತ್ರಿ ನರಿ ನಿಕ್ ವೈಲ್ಡ್ ಅವರ ಹೊಸ ಸಾಹಸಗಳು ಮುಂದುವರಿಯಲಿವೆ.

error: Content is protected !!