ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರ್ಕಾವತಿ ನದಿಯ ಹಿನ್ನೀರಿನಲ್ಲಿ ಎರಡು ಕಾಡಾನೆಗಳು ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಕನಕಪುರ ತಾಲೂಕಿನ ಸಾತನೂರು ಅರಣ್ಯ ವಲಯದ ಕುನ್ನೂರು ಗ್ರಾಮದ ಬಳಿ ನಡೆದಿದೆ. ಪ್ರಕೃತಿ ಸೌಂದರ್ಯ ತುಂಬಿರುವ ಈ ಪ್ರದೇಶದಲ್ಲಿ ನಡೆದ ಈ ದುರ್ಘಟನೆ ಅರಣ್ಯಾಧಿಕಾರಿಗಳಷ್ಟೇ ಅಲ್ಲ, ಸ್ಥಳೀಯರನ್ನೂ ವಿಷಾದಕ್ಕೆ ಒಳಪಡಿಸಿದೆ.
ಮಾಹಿತಿ ಪ್ರಕಾರ, ಕಾಡಾನೆಗಳು ನದಿಯ ಹಿನ್ನೀರನ್ನು ದಾಟಲು ಪ್ರಯತ್ನಿಸಿದಾಗ ನೀರಿನ ಅಡಿಯಲ್ಲಿದ್ದ ಜೊಂಡಿನಲ್ಲಿ ಸಿಲುಕಿಕೊಂಡಿವೆ. ನೀರಿನ ಆಳ ಹೆಚ್ಚಿರುವುದರಿಂದ ಅವು ಮುಂದೆ ಹೋಗಲು ಅಥವಾ ಹಿಂದಿರುಗಲು ಸಾಧ್ಯವಾಗದೆ, ಅಲ್ಲೇ ಒದ್ದಾಡಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಸ್ಥಳೀಯರು ಈ ಘಟನೆ ಗಮನಿಸಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸೂಚನೆ ದೊರೆತ ಕೂಡಲೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆನೆಗಳ ಕಳೇಬರವನ್ನು ಹಿನ್ನೀರಿನಿಂದ ಮೇಲಕ್ಕೆತ್ತುವ ಕಾರ್ಯಾಚರಣೆ ಮುಂದುವರಿದಿದೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ನಿಖರವಾದ ಸಾವಿನ ಕಾರಣವನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

