ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಚೇತರಿಸಿಕೊಂಡಿದ್ದು, ಶನಿವಾರ ಡಿಸ್‌ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೃದಯಾಲಯದಲ್ಲಿ ಸತ್ಯನಾರಾಯಣ ರಾವ್ ಅವರಿಗೆ 2 ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಚೆನ್ನೈಯಿಂದ ಸ್ವತಃ ರಜನಿಕಾಂತ್ ಆಗಮಿಸಿ ಅಣ್ಣನನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ವೈದ್ಯರ ಸಲಹೆಯಂತೆ 2 ದಿನಗಳ ಚಿಕಿತ್ಸೆ ಬಳಿಕ ಸತ್ಯನಾರಾಯಣ ರಾವ್ ಚೇತರಿಸಿಕೊಂಡಿದ್ದು, ಇದೀಗ ತಮ್ಮ ನಿವಾಸಕ್ಕೆ ಮರಳಿದ್ದಾರೆ. ಇದೀಗ ಅಣ್ಣನ ಆರೋಗ್ಯ ವಿಚಾರಿಸಲು ವಾಪಸ್ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಗೆ ರಜನಿಕಾಂತ್ ಭೇಟಿ ನೀಡಿದ ವಿಡಿಯೊ ಸದ್ಯ ವೈರಲ್ ಆಗುತ್ತಿದೆ.
ರಜನಿಕಾಂತ್ ಅವರಿಗೆ ಸತ್ಯನಾರಾಯಣ ರಾವ್ ಸಹೋದರ ಮಾತ್ರವಲ್ಲ ಮಾರ್ಗದರ್ಶಿಯೂ ಹೌದು. ರಜನಿಕಾಂತ್ ಸೂಪರ್‌ಸ್ಟಾರ್ ಆಗಿದ್ದಾರೆಂದರೆ ಅದಕ್ಕೆ ಕಾರಣ ಈ ಸತ್ಯನಾರಾಯಣ ರಾವ್ ಎನ್ನುತ್ತಾರೆ ಕುಟುಂಬಸ್ಥರು. ರಜನಿಕಾಂತ್ ಮೇಲೆ ಅವರು ಅಷ್ಟು ಪ್ರಭಾವ ಬೀರಿದ್ದಾರೆ. ರಜನಿಕಾಂತ್ ಅವರ ಬೆನ್ನೆಲುಬು ಎಂದೇ ಅವರು ಗುರುತಿಸಲ್ಪಡುತ್ತಾರೆ.

