ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈಲಿನಲ್ಲಿರುವ ಕೈದಿಗಳಿಗೆ ವಿಶೇಷ ಆತಿಥ್ಯ ದೊರೆಯುತ್ತಿರುವ ದೃಶ್ಯಗಳು ವೈರಲ್ ಆದ ಬೆನ್ನಲ್ಲೇ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಡಾ ಜಿ.ಪರಮೇಶ್ವರ್ ಅವರು ಸಭೆ ನಡೆಸುತ್ತಿದ್ದಾರೆ.
ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಕಚೇರಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕರ್ನಾಟಕ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಶರತ್ ಚಂದ್ರ, ದಕ್ಷಿಣ ವಲಯ ಕಾರಾಗೃಹಗಳ ಮಹಾನಿರೀಕ್ಷಕಿ ಕೆ.ಸಿ.ದಿವ್ಯಶ್ರೀ, ಹೆಚ್ಚುವರಿ ಕಾರಾಗೃಹ ಮಹಾನಿರೀಕ್ಷಕ ಪಿ.ವಿ.ಆನಂದ್ ರೆಡ್ಡಿ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ, ಪೂರ್ವ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಪಶ್ಚಿಮ ವಿಭಾಗ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಕೈದಿಗಳ ಮೋಜು, ಮಸ್ತಿಯ ಕುರಿತು ಗರಂ ಆಗಿರುವ ಗೃಹ ಸಚಿವರು, ಕಾರಾಗೃಹದೊಳಗಿರುವ ಕೈದಿಗಳಿಗೆ ಮೊಬೈಲ್ ಫೋನ್‌ಗಳು ಸಿಕ್ಕಿದ್ದು ಹೇಗೆ? ಈಗ ವೈರಲ್ ಆಗಿರುವ ದೃಶ್ಯಗಳು ಯಾವಾಗ ಚಿತ್ರೀಕರಿಸಲ್ಪಟ್ಟಿವೆ? ಎಂದು ವಿವರ ಪಡೆಯುತ್ತಿದ್ದಾರೆ. ಸದ್ಯ ವೈರಲ್ ಆಗಿರುವ ಫೋಟೋ, ವಿಡಿಯೋಗಳನ್ನು ಪ್ರದರ್ಶಿಸಿ ಪೊಲೀಸ್ ಅಧಿಕಾರಿಗಳನ್ನು ಗೃಹ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ.

