ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕಾಂತಾರ: ಚಾಪ್ಟರ್ 1’ ತನ್ನ ಆರನೇ ವಾರಾಂತ್ಯದಲ್ಲಿಯೂ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಕಳೆದ ವಾರಾಂತ್ಯಕ್ಕಿಂತ ಸುಮಾರು 65 ಶೇಕಡಾ ಇಳಿಕೆಯಾಗಿದ್ದರೂ, ಈ ವಾರಾಂತ್ಯದಲ್ಲಿ ಚಿತ್ರವು ಅಂದಾಜು ₹3.50 ಕೋಟಿ ರೂ. ಗಳಿಸಿದೆ. ಈ ಗಳಿಕೆಯು ‘ಛಾವ’ ಚಿತ್ರವನ್ನು ಹಿಂದಿಕ್ಕಿ, 2025ರಲ್ಲಿ ಭಾರತದ ಅತ್ಯಧಿಕ ಗಳಿಕೆ ಮಾಡಿದ ಚಿತ್ರವಾಗಿ ‘ಕಾಂತಾರ: ಚಾಪ್ಟರ್ 1’ ದಾಖಲೆ ನಿರ್ಮಿಸಿದೆ.
ಈ ವರ್ಷದ ಇನ್ನೂ ಒಂದು ತಿಂಗಳು ಬಾಕಿ ಇರುವುದರಿಂದ, ‘ಧುರಂಧರ್’ ಅಥವಾ ‘ಅವತಾರ್ 3’ ರೀತಿಯ ದೊಡ್ಡ ಸಿನಿಮಾಗಳು ಹಿಟ್ ಆಗದಿದ್ದರೆ, ‘ಕಾಂತಾರ’ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.
ಒಟ್ಟು ಬಾಕ್ಸ್ ಆಫೀಸ್ ಗಳಿಕೆ ಪ್ರಸ್ತುತ ₹697 ಕೋಟಿ ರೂ. ಆಗಿದ್ದು, ದೇಶದ ಸರ್ವಕಾಲೀನ ಅತ್ಯಧಿಕ ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ‘ಕಾಂತಾರ’ ಎಂಟನೇ ಸ್ಥಾನದಲ್ಲಿದೆ. ಮುಂದಿನ ಕೆಲವು ದಿನಗಳಲ್ಲಿ ಅದು ಏಳನೇ ಸ್ಥಾನಕ್ಕೆ ಏರಲಿದೆ ಎಂದು ವರದಿಯಾಗಿದೆ. ₹700 ಕೋಟಿ ರೂ. ಕ್ಲಬ್ ಸೇರುವ ಗುರಿ ಈಗ ಅತಿ ಸಮೀಪದಲ್ಲಿದೆ.
ಆದಾಗ್ಯೂ, ಈ ಮೈಲುಗಲ್ಲು ಕಳೆದ ವಾರವೇ ಮುಟ್ಟಬೇಕಿತ್ತು. ಆದರೆ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಚಿತ್ರವನ್ನು ಶೀಘ್ರ ಬಿಡುಗಡೆ ಮಾಡಿದ ಪರಿಣಾಮ, ಚಿತ್ರಮಂದಿರಗಳಲ್ಲಿ ಸಿನಿಮಾ ಓಟಕ್ಕೆ ಹೊಡೆತ ಬಿದ್ದಿದೆ. ಈ ಕಾರಣದಿಂದ ಸುಮಾರು ₹15–₹20 ಕೋಟಿ ರೂ. ನಷ್ಟವಾಗಿದೆಯೆಂದು ತಜ್ಞರು ಅಂದಾಜಿಸಿದ್ದಾರೆ. ವ್ಯವಹಾರಿಕ ದೃಷ್ಟಿಯಿಂದ ಇದು ದೊಡ್ಡ ನಷ್ಟವಲ್ಲ.

