ಹೊಸದಿಗಂತ ವರದಿ, ಬೆಳಗಾವಿ :
ಪ್ರತಿಷ್ಠಿತ ಕಣವಾದ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಉಪಾಧ್ಯಕ್ಷರಾಗಿ ಶಾಸಕ ರಾಜು ಕಾಗೆ ಅವಿರೋಧಯಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಖಾಸಗಿ ಹೊಟೇಲ್ ನಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನದ ಬಗ್ಗೆ ಜಾರಕಿಹೊಳಿ ಸಹೋದರ ನೇತ್ರತ್ವದಲ್ಲಿ ಮಹತ್ವದ ಸಭೆಯ ಬಳಿಕ ನಿರ್ಣಯ ಕೈಗೊಳ್ಳಲಾಗಿದೆ.
ಜಾರಕಿಹೊಳಿ ಸಹೋದರರು ಬ್ಯಾಂಕ್ ನ ನಿರ್ದೇಶಕ ಸ್ಥಾನದ ಚುನಾವಣೆಯ ನಾಮಪತ್ರ ಸಲ್ಲಿಕೆಯ ವೇಳೆಯಲ್ಲಿ, ಲಿಂಗಾಯತರನ್ನೆ ಈ ಭಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆ ಮಾಡುತ್ತೇವೆ ಎಂದು ಮೊದಲೇ ಭರವಸೆ ನೀಡಿದ್ದರು. ಅದರಂತೆ ಈಗ ಲಿಂಗಾಯತ ಸಮುದಾಯದ ಅಣ್ಣಾ ಸಾಹೇಬ್ ಜೊಲ್ಲೆರ ಅವರನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಬೆಳಗಾವಿ ಜಿಲ್ಲಾಧ್ಯಂತ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ವಿವಿಧ ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದ ನಾಯಕರೇ ಆಯ್ಕೆಯಾಗಿದ್ದರು. ಈಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಕೂಡ ಲಿಂಗಾಯತ ಸಮುದಾಯಕ್ಕೆ ನೀಡಿ, ಆ ಸಮುದಾಯದ ವಿಶ್ವಾಸ, ಬೆಂಬಲಗಳಿಸುವ ಪ್ರಯತ್ನವನ್ನು ಜಾರಕಿಹೊಳಿ ಸಹೋದರರು ಮಾಡಿದ್ದಾರೆ.
ಈ ಭಾರಿ ಪ್ರತಿಷ್ಠಿತ ಚುನಾವಣೆ ಯಾಗಿರುವ ಡಿಸಿಸಿ ಬ್ಯಾಂಕ್, ಆಡಳಿತದ ಚುಕ್ಕಾಣಿ ಹಿಡಿಯಲು ಜಾರಕಿಹೊಳಿ ಸಹೋದರರು ಹಾಗೂ ಶಾಸಕ ಲಕ್ಷ್ಮಣ್ ಸವದಿ – ಮಾಜಿ ಸಂಸದ ರಮೇಶ್ ಕತ್ತಿ ಬಣಗಳಾಗಿ ಫೈಟ್ ಜೋರಾಗಿಯೇ ನಡೆಸಿದರು, ಆದರೆ ಅಂತಿಮವಾಗಿ ಜಾರಕಿಹೊಳಿ ಸಹೋದರ ಗುಂಪಿನ ಹೆಚ್ಚಿನ ಸಂಖ್ಯೆಯ ನಿರ್ದೇಶಕರು ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಕೂಡ ಜಾರಕಿಹೊಳಿ ಸಹೋದರರ ಬಣದ ಅಣ್ಣಾ ಸಾಹೇಬ್ ಜೊಲ್ಲೆ ಪಾಲಾಗಿದೆ.
ಈ ಬ್ಯಾಂಕ್ ನ ಚುನಾವಣೆಯಲ್ಲಿ ಪಕ್ಷ ರಾಜಕೀಯ ಮುಖ್ಯವಾಗಿರಲಿಲ್ಲ. ಒಂದೇ ಪಕ್ಷದವರೇ ಎದುರಾಳಿಗಳೂ ಆಗಿದ್ದರು. ಲಿಂಗಾಯತ ಸಮುದಾಯದ ಅಣ್ಣಾ ಸಾಹೇಬ್ ಜೊಲ್ಲೆ ನಿಪ್ಪಾಣಿ ಕ್ಷೇತ್ರದಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿ ಬರಲು ಜಾರಕಿಹೊಳಿ ಸಹೋದರರು ಬೆಂಬಲ ಸೂಚಿಸಲಾಗಿತ್ತು.
2024ರ ಲೋಕಸಭಾ ಚುನಾವಣೆಯಲ್ಲಿ ಇದೇ ಅಣ್ಣಾ ಸಾಹೇಬ್ ಜೊಲ್ಲೆ ವಿರುದ್ಧ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ತಮ್ಮ ಮಗಳು ಪ್ರಿಯಾಂಕಾ ಜಾರಕಿಹೊಳಿರನ್ನು ನಿಲ್ಲಿಸಿ ಗೆಲ್ಲುವಂತೆ ಮಾಡಿದ್ದರು. ಈಗ ಅದೇ ರಾಜಕೀಯ ವೈರಿಯನ್ನು ತಮ್ಮ ಬಣಕ್ಕೆ ಸೆಳೆದು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಮಾಡುವುದರ ಜೊತೆಗೆ ಆಯ್ಕೆಯಾಗುವಂತೆ ಮಾಡಿದ್ದಾರೆ.
ರಾಜಕೀಯ ವೈರಿ ರಮೇಶ್ ಕತ್ತಿ, ಲಕ್ಷ್ಮಣ್ ಸವದಿ ಕೈ ಮೇಲಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗುವುದರ ಜೊತೆಗೆ, ರಾಜ್ಯಕೀಯ ಲೆಕ್ಕಾಚಾರದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯೇ ಸಾಕ್ಷಿಯಾಗಿದೆ ಎಂದು ಸಾರ್ವಜನಿಕ ಮಾತುಗಳು ಕೇಳಿಬರುತ್ತಿವೆ.

