Monday, January 12, 2026
Monday, January 12, 2026
spot_img

ಅರಬೈಲ್ ಘಾಟ್‌ನಲ್ಲಿ ಭೀಕರ ಅಗ್ನಿ ಅನಾಹುತ: ಸ್ಪಿರಿಟ್ ಟ್ಯಾಂಕರ್ ಭಸ್ಮ, ಚಾಲಕ ಪಾರು

ಹೊಸದಿಗಂತ ವರದಿ ಯಲ್ಲಾಪುರ:

ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್‌ನ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಸ್ಪಿರಿಟ್ (ಎಥನಾಲ್) ತುಂಬಿದ್ದ ಟ್ಯಾಂಕರ್ ಲಾರಿಯೊಂದು ಮಾರುತಿ ದೇವಸ್ಥಾನದ ಸಮೀಪ ರಸ್ತೆ ಬದಿಯ ಮರಕ್ಕೆ ರಭಸವಾಗಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಚಿಕ್ಕೋಡಿಯಿಂದ ಕೇರಳ ಕಡೆಗೆ ಸಾಗುತ್ತಿದ್ದ ಈ ಲಾರಿ ಡಿಕ್ಕಿ ಹೊಡೆದ ತಕ್ಷಣವೇ ಅದರಲ್ಲಿ ತುಂಬಿದ್ದ ಸ್ಪಿರಿಟ್‌ನಿಂದಾಗಿ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ತೀವ್ರತೆ ವಿಪರೀತವಾಗಿದ್ದರಿಂದ ಇಡೀ ಟ್ಯಾಂಕರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಅದೃಷ್ಟವಶಾತ್ ಚಾಲಕ ಪಾರು:

ಅದೃಷ್ಟವಶಾತ್, ಲಾರಿಯ ಚಾಲಕನ ಸಮಯಪ್ರಜ್ಞೆಯಿಂದಾಗಿ ಅವರು ಬೆಂಕಿ ಹೊತ್ತಿಕೊಳ್ಳುವ ಮುನ್ನವೇ ವಾಹನದಿಂದ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ದೊಡ್ಡ ಅನಾಹುತವನ್ನು ತಪ್ಪಿಸಿದಂತಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಯಲ್ಲಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸುಮಾರು ಸಮಯದ ಹರಸಾಹಸದ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು. ಯಲ್ಲಾಪುರ ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಅನಿರೀಕ್ಷಿತ ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಕೆಲಕಾಲ ಸಂಚಾರವು ಅಸ್ತವ್ಯಸ್ತಗೊಂಡಿತ್ತು. ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಯ ಕಾರ್ಯಾಚರಣೆಯ ನಂತರ ಹೆದ್ದಾರಿಯಲ್ಲಿ ಸಂಚಾರವನ್ನು ಪುನಃ ಸುಗಮಗೊಳಿಸಲಾಗಿದೆ.

Related articles

Comments

share

Latest articles

Newsletter

error: Content is protected !!