ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಹೆಮ್ಮೆ ಹಾಗೂ ದೇಶ-ವಿದೇಶಗಳಲ್ಲಿ ಅಷ್ಟೇ ಬೇಡಿಕೆ ಇರುವ ಕೆಎಂಎಫ್‌ನ ನಂದಿನಿ ತುಪ್ಪದ ಶುದ್ಧತೆ ಕಾಪಾಡಲು ಸಂಸ್ಥೆ ಇದೀಗ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ತಿರುಪತಿ ತಿಮ್ಮಪ್ಪನ ಲಡ್ಡುಗೆ ಪ್ರಮುಖವಾಗಿ ಬಳಸಲಾಗುವ ಈ ನಂದಿನಿ ತುಪ್ಪದ ಬೇಡಿಕೆಯನ್ನು ಬಂಡವಾಳ ಮಾಡಿಕೊಂಡು ವಂಚಿಸುತ್ತಿದ್ದ ಬೃಹತ್ ನಕಲಿ ತುಪ್ಪ ಮಾರಾಟ ಜಾಲ ಇತ್ತೀಚೆಗೆ ಪತ್ತೆಯಾದ ಹಿನ್ನೆಲೆಯಲ್ಲಿ, ನಕಲಿಗೆ ಕಡಿವಾಣ ಹಾಕಲು ಕೆಎಂಎಫ್ ‘ಕ್ಯೂಆರ್ ಕೋಡ್’ ತಂತ್ರಜ್ಞಾನವನ್ನು ಬಳಸಲು ಸಿದ್ಧತೆ ನಡೆಸಿದೆ.
ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಮತ್ತು ಕೆಎಂಎಫ್‌ನ ಜಾಗೃತ ದಳ ಇತ್ತೀಚೆಗೆ ಬಯಲು ಮಾಡಿತ್ತು. ಈ ಪ್ರಕರಣದಿಂದ ಎಚ್ಚೆತ್ತ ಕೆಎಂಎಫ್ ಅಧಿಕಾರಿಗಳು, ನಂಬಿಕೆಯಿಂದ ತುಪ್ಪ ಖರೀದಿಸುವ ಗ್ರಾಹಕರಿಗೆ ಮೋಸವಾಗಬಾರದೆಂಬ ಉದ್ದೇಶದಿಂದ, ಇನ್ನು ಮುಂದೆ ತುಪ್ಪದ ಪ್ಯಾಕೆಟ್ ಮತ್ತು ಬಾಟಲಿಗಳ ಮೇಲೆ ಕಡ್ಡಾಯವಾಗಿ ಕ್ಯೂಆರ್ ಕೋಡ್ ಮುದ್ರಿಸಲು ತೀರ್ಮಾನಿಸಿದ್ದಾರೆ.
ಗ್ರಾಹಕರಿಗೆ ಸಿಗಲಿದೆ ಶುದ್ಧತೆಯ ಭರವಸೆ
ಈ ಕುರಿತು ಕೆಎಂಎಫ್ ಅಧಿಕಾರಿಗಳು ಮತ್ತು ತಜ್ಞರ ನಡುವೆ ಈಗಾಗಲೇ ಮಹತ್ವದ ಸಭೆ ನಡೆದಿದೆ. ಹೊಸ ಪ್ಲಾನ್ ಪ್ರಕಾರ, ಕ್ಯೂಆರ್ ಕೋಡ್ ಬಳಸುವುದರಿಂದ ತುಪ್ಪದ ಉತ್ಪಾದನಾ ಘಟಕ, ಪೂರೈಕೆ ಮಾರ್ಗ, ಮಾರಾಟವಾದ ಮಳಿಗೆ ಮತ್ತು ಖರೀದಿಸಿದ ಗ್ರಾಹಕರ ವಿವರಗಳನ್ನು ಸ್ಕ್ಯಾನ್ ಮೂಲಕ ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗಲಿದೆ. ಈ ಮೂಲಕ ಗ್ರಾಹಕರು ತಾವು ಖರೀದಿಸಿದ ನಂದಿನಿ ತುಪ್ಪ ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಕ್ಷಣಾರ್ಧದಲ್ಲಿ ಖಚಿತಪಡಿಸಿಕೊಳ್ಳಬಹುದು.
ಅತ್ಯಾಧುನಿಕ ತಂತ್ರಜ್ಞಾನವಾದರೂ, ಈ ಕ್ಯೂಆರ್ ಕೋಡ್ ವ್ಯವಸ್ಥೆಯಿಂದಾಗುವ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ಹೊರಿಸದಿರಲು ಕೆಎಂಎಫ್ ನಿರ್ಧರಿಸಿದೆ. ಸಂಸ್ಥೆಯೇ ಈ ಸಂಪೂರ್ಣ ವೆಚ್ಚವನ್ನು ಭರಿಸಲು ಮುಂದಾಗಿದೆ. ಒಟ್ಟಿನಲ್ಲಿ, ಗ್ರಾಹಕರ ನಂಬಿಕೆಯನ್ನು ಮರಳಿ ಪಡೆಯಲು ಕೆಎಂಎಫ್ ಇದೀಗ ಹೊಸ ‘ದಾಳ’ ಉರುಳಿಸಿದ್ದು, ಈ ಕ್ರಮದಿಂದ ನಕಲಿ ಜಾಲಕ್ಕೆ ಎಷ್ಟು ಮಟ್ಟಿಗೆ ಕಡಿವಾಣ ಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

