ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಂಚಿಯ ಜೆಎಸ್ ಸಿಎ ಸ್ಟೇಡಿಯಂನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ನಡೆದ ಮೊದಲ ಏಕದಿನ ಪಂದ್ಯವು ಟೀಮ್ ಇಂಡಿಯಾದ ಗೆಲುವಿನ ಜೊತೆಗೆ, ಸೌತ್ ಆಫ್ರಿಕಾದ ಒಂದು ವೀರ ಸೋಲಿನ ಮೂಲಕ ಇತಿಹಾಸದ ಪುಟ ಸೇರಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಸೌತ್ ಆಫ್ರಿಕಾ, ವಿರಾಟ್ ಕೊಹ್ಲಿಯವರ ಅಮೋಘ 135 ರನ್‌ಗಳ ಶತಕದ ನೆರವಿನಿಂದ ಭಾರತವು ನಿಗದಿತ 50 ಓವರ್‌ಗಳಲ್ಲಿ ಬೃಹತ್ ಮೊತ್ತವಾದ 349 ರನ್ ಕಲೆಹಾಕಲು ಸಾಕ್ಷಿಯಾಯಿತು. ಗೆಲ್ಲಲು 350 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಪ್ರವಾಸಿ ತಂಡಕ್ಕೆ ಆರಂಭದಲ್ಲೇ ಸಿಡಿಲು ಬಡಿದಂತಾಗಿತ್ತು.
ಕೇವಲ 11 ರನ್ ಗಳಿಸುವಷ್ಟರಲ್ಲಿ ಸೌತ್ ಆಫ್ರಿಕಾ ತನ್ನ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಇಲ್ಲಿಂದ ಆಫ್ರಿಕನ್ ಬ್ಯಾಟರ್‌ಗಳು ನಡೆಸಿದ ದಿಟ್ಟ ಹೋರಾಟವು ಕ್ರಿಕೆಟ್ ಇತಿಹಾಸವನ್ನೇ ಮರುಬರೆಯಿತು.
ಬೃಹತ್ ಆಘಾತದ ನಂತರವೂ ಎದೆಗುಂದದ ಆಫ್ರಿಕಾ ಪಡೆ, ಅಂತಿಮವಾಗಿ ಬರೋಬ್ಬರಿ 321 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಸೋಲಿನ ನಡುವೆಯೂ ಸೌತ್ ಆಫ್ರಿಕಾ ಒಂದು ಭರ್ಜರಿ ವಿಶ್ವ ದಾಖಲೆ ನಿರ್ಮಿಸಿದೆ.
54 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ, ರನ್ ಚೇಸಿಂಗ್ ಮಾಡುವಾಗ 15 ರನ್‌ಗಳ ಒಳಗೆ 3 ವಿಕೆಟ್ ಕಳೆದುಕೊಂಡರೂ ಸಹ 300+ ರನ್ ಗಳಿಸಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಸೌತ್ ಆಫ್ರಿಕಾ ಪಾತ್ರವಾಗಿದೆ. ಗೆಲುವು ಭಾರತದ ಪಾಲಾದರೂ, ಆಫ್ರಿಕಾ ತಂಡದ ಈ ಅಭೂತಪೂರ್ವ ಹೋರಾಟವು ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

