ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯ್‌ಪುರದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯದ ಸಂದರ್ಭದಲ್ಲೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂಬರುವ ಐದು ಪಂದ್ಯಗಳ ಟಿ20 ಸರಣಿಗಾಗಿ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಪ್ರಮುಖ ಬದಲಾವಣೆಗಳು ಮತ್ತು ಅಚ್ಚರಿಯ ನಿರ್ಧಾರಗಳು ಕಂಡುಬಂದಿವೆ.
ಗಾಯದಿಂದ ಚೇತರಿಸಿಕೊಂಡಿರುವ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿದ್ದಾರೆ. ಗಿಲ್‌ಗೆ ಉಪನಾಯಕತ್ವದ ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದೆ. ಆದರೆ, ಅವರ ಫಿಟ್‌ನೆಸ್ ಸಂಪೂರ್ಣವಾಗಿ ಪರೀಕ್ಷೆಯಾದ ನಂತರವೇ ಅವರು ಸರಣಿಯಲ್ಲಿ ಭಾಗವಹಿಸುವುದು ಖಚಿತವಾಗಲಿದೆ ಎಂದು ಆಯ್ಕೆ ಸಮಿತಿ ಸ್ಪಷ್ಟಪಡಿಸಿದೆ. ಗಿಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡು ನಂತರ ಟೆಸ್ಟ್ ಮತ್ತು ಏಕದಿನ ಸರಣಿಯಿಂದ ಹೊರಗುಳಿದಿದ್ದರು.
ಹಾರ್ದಿಕ್ ಪಾಂಡ್ಯ ಸುಮಾರು ಎರಡು ತಿಂಗಳ ನಂತರ ಟೀಂ ಇಂಡಿಯಾಕ್ಕೆ ಮರಳುತ್ತಿದ್ದಾರೆ. 2025ರ ಏಷ್ಯಾಕಪ್ ಫೈನಲ್ ಪಂದ್ಯಕ್ಕೂ ಮುನ್ನ ತಂಡದಿಂದ ಹೊರಬಿದ್ದಿದ್ದ ಪಾಂಡ್ಯ, ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಿ ತಮ್ಮ ಫಿಟ್‌ನೆಸ್ ಅನ್ನು ಸಾಬೀತುಪಡಿಸಿದ್ದಾರೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಈ ಸರಣಿಗಾಗಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ ಬಹುತೇಕ ಆಟಗಾರರನ್ನೇ ಉಳಿಸಿಕೊಂಡಿದೆ. ಆದರೆ, ಪಾಂಡ್ಯ ಅವರ ಸೇರ್ಪಡೆಯಿಂದಾಗಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವರನ್ನು ತಂಡದಿಂದ ಕೈಬಿಟ್ಟಿರುವ ನಿರ್ಧಾರವು ತೀವ್ರ ಚರ್ಚೆಗೆ ಕಾರಣವಾಗಿದೆ.
ಆಸ್ಟ್ರೇಲಿಯಾ ಸರಣಿಯಲ್ಲಿ ರಿಂಕುಗೆ ಕೇವಲ ಒಂದು ಪಂದ್ಯದಲ್ಲಿ ಅವಕಾಶ ಸಿಕ್ಕಿತ್ತು, ಆದರೆ ಅದು ಮಳೆಯಿಂದಾಗಿ ರದ್ದಾಗಿತ್ತು. ಈ ವರ್ಷ ರಿಂಕು ಕೇವಲ ಐದು ಟಿ20 ಪಂದ್ಯಗಳ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಂಡಿದ್ದು, ಅವುಗಳಲ್ಲಿ ಮೂರು ಪಂದ್ಯಗಳಲ್ಲಿ ಮಾತ್ರ ಬ್ಯಾಟಿಂಗ್ ಮಾಡುವ ಅವಕಾಶ ಲಭಿಸಿದೆ. ರಿಂಕು ಜೊತೆಗೆ, ನಿತೀಶ್ ಕುಮಾರ್ ರೆಡ್ಡಿ ಅವರನ್ನು ಕೂಡ ಸರಣಿಯಿಂದ ಹೊರಗಿಡಲಾಗಿದೆ.
ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ಭಾರತ ತಂಡ:
ಸೂರ್ಯಕುಮಾರ್ ಯಾದವ್ (ನಾಯಕ)
ಶುಭ್ಮನ್ ಗಿಲ್ (ಉಪನಾಯಕ)
ಅಭಿಷೇಕ್ ಶರ್ಮಾ
ತಿಲಕ್ ವರ್ಮಾ
ಹಾರ್ದಿಕ್ ಪಾಂಡ್ಯ
ಶಿವಂ ದುಬೆ
ಅಕ್ಷರ್ ಪಟೇಲ್
ಜಿತೇಶ್ ಶರ್ಮಾ
ಸಂಜು ಸ್ಯಾಮ್ಸನ್
ಜಸ್ಪ್ರೀತ್ ಬುಮ್ರಾ
ವರುಣ್ ಚಕ್ರವರ್ತಿ
ಅರ್ಷದೀಪ್ ಸಿಂಗ್
ಕುಲ್ದೀಪ್ ಯಾದವ್
ಹರ್ಷಿತ್ ರಾಣಾ
ವಾಷಿಂಗ್ಟನ್ ಸುಂದರ್

