Thursday, December 4, 2025

‘ಪೇ ಸಿಎಂ’ ಈಗ ‘ಶೇ. 63ರ ಕಮಿಷನ್’ ಸಿಎಂ?: ಉಪಲೋಕಾಯುಕ್ತರ ಹೇಳಿಕೆಗೆ ಅಶೋಕ್ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಶೇ. 63ರಷ್ಟು ಭ್ರಷ್ಟಾಚಾರ ಇದೆ ಎಂಬ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ದಿಟ್ಟ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ಈ ಹೇಳಿಕೆಯನ್ನು ಪ್ರಬಲ ಅಸ್ತ್ರವಾಗಿ ಬಳಸಿಕೊಂಡಿರುವ ವಿರೋಧ ಪಕ್ಷ ಬಿಜೆಪಿ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ‘40% ಕಮಿಷನ್’ ಆರೋಪ ಮಾಡಿ, ‘ಪೇ ಸಿಎಂ’ ಪೋಸ್ಟರ್‌ಗಳನ್ನು ನಗರದಾದ್ಯಂತ ಅಂಟಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ ‘ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ’ ಎಂದು ಪ್ರತಿಪಕ್ಷಗಳು ಹರಿಹಾಯ್ದಿವೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಉಪಲೋಕಾಯುಕ್ತರ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ನಾವು ಹಿಂದಿನ ಸರ್ಕಾರವನ್ನ 60 ಪರ್ಸೆಂಟ್​ ಕಮಿಷನ್ ಸರ್ಕಾರ ಎಂದು ಟೀಕಿಸಿದ್ದೆವು. ಆದರೆ ಈಗ ನ್ಯಾಯಾಧೀಶರೇ 63% ಭ್ರಷ್ಟಾಚಾರ ಇದೆ ಎಂದು ಹೇಳಿದ್ದಾರೆ,” ಎಂದು ಅವರು ಹೇಳಿದರು.

“ಮುಡಾ ಹಗರಣದ ಸಂದರ್ಭದಲ್ಲಿ ಪದೇಪದೇ ಸಾಕ್ಷಿ ಕೇಳುತ್ತಿದ್ದ ಮುಖ್ಯಮಂತ್ರಿಗಳು ಈಗ ನ್ಯಾಯಾಧೀಶರ ಹೇಳಿಕೆಯನ್ನು ಕಡೆಗಣಿಸಲಾಗದು. ಕೋರ್ಟ್ ಮತ್ತು ನ್ಯಾಯಾಧೀಶರಿಗಿಂತ ದೊಡ್ಡ ಸಾಕ್ಷಿ ಬೇರೆ ಯಾವುದೂ ಇಲ್ಲ,” ಎಂದು ಅಶೋಕ್ ತೀಕ್ಷ್ಣವಾಗಿ ನುಡಿದರು.

63% ಕಮಿಷನ್ ಆರೋಪದ ತನಿಖೆಗಾಗಿ ರಾಜ್ಯ ಸರ್ಕಾರವು ಎಸ್‌ಐಟಿ ರಚಿಸುವುದರ ಬಗ್ಗೆ ಪ್ರಶ್ನಿಸಿದ ಅಶೋಕ್, “ನ್ಯಾಯಾಧೀಶರು ನಿಮ್ಮ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ. ನಿಮಗೆ ಧೈರ್ಯವಿದ್ದರೆ ತಕ್ಷಣವೇ ಈ ಹೇಳಿಕೆಯ ಕುರಿತು ಸಿಬಿಐ ತನಿಖೆಗೆ ಒಪ್ಪಿಸಿ,” ಎಂದು ನೇರ ಸವಾಲು ಹಾಕಿದರು.

ರಾಜ್ಯದ ರಾಜಕೀಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ, ಆರ್. ಅಶೋಕ್ ಬಿಹಾರ ಚುನಾವಣೆಯತ್ತ ಗಮನ ಸೆಳೆದರು. “ಬಿಹಾರ ಚುನಾವಣೆಗಾಗಿ ಕರ್ನಾಟಕದಿಂದ ಬರೋಬ್ಬರಿ 300 ಕೋಟಿ ರೂ. ವರ್ಗಾವಣೆ ಆಗಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಹಣ ತಲುಪಿಸುವವರೆಗೆ ಅಷ್ಟೇ ಇಲ್ಲಿ ಅಧಿಕಾರ ಇರುತ್ತದೆ. ಕಾಂಗ್ರೆಸ್‌ನ ಮನೆ ದೇವರೇ ಭ್ರಷ್ಟಾಚಾರ,” ಎಂದು ಕಿಡಿಕಾರಿದರು.

“‘ಪೇ ಸಿಎಂ’ ಪೋಸ್ಟರ್​ಗಳನ್ನು ರೋಡ್ ರೋಡ್​ನಲ್ಲಿ ಅಂಟಿಸಿದ್ದ ಕಾಂಗ್ರೆಸ್ ನಾಯಕರು, ಈಗ ಅವರದೇ ಮುಖದ ಮೇಲೆ ಪೋಸ್ಟರ್ ಅಂಟಿಸುವ ಪರಿಸ್ಥಿತಿ ಬಂದಿದೆ,” ಎಂದು ಲೇವಡಿ ಮಾಡಿದ ಅಶೋಕ್, ಉಪಲೋಕಾಯುಕ್ತರ ಹೇಳಿಕೆಯನ್ನೇ ಆದಾರವಾಗಿಟ್ಟುಕೊಂಡು ಸಿಬಿಐ ತನಿಖೆಗೆ ಒತ್ತಾಯಿಸಿದರು.

error: Content is protected !!