Friday, December 5, 2025

ಸ್ಟಾರ್ಕ್ ಬೆಂಕಿ ಬೌಲಿಂಗ್‌ಗೆ ಇಂಗ್ಲೆಂಡ್ ತತ್ತರ; ಹೊಸ ಮೈಲಿಗಲ್ಲು ಸ್ಥಾಪಿಸಿದ ಎಡಗೈ ವೇಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಅವರು ಪಾಕಿಸ್ತಾನದ ದಿಗ್ಗಜ ವಾಸಿಮ್ ಅಕ್ರಮ್ ಅವರ ವಿಶ್ವ ದಾಖಲೆಯನ್ನು ಮುರಿದು ಇತಿಹಾಸ ನಿರ್ಮಿಸಿದ್ದಾರೆ.

ಪಿಂಕ್ ಬಾಲ್ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಇಂಗ್ಲೆಂಡ್‌ನ ವಿರುದ್ಧ ಮಿಂಚಿನ ಪ್ರದರ್ಶನ ನೀಡಿದ ಸ್ಟಾರ್ಕ್, ಬರೋಬ್ಬರಿ 6 ವಿಕೆಟ್‌ಗಳನ್ನು ಕಬಳಿಸುವ ಮೂಲಕ ದಿನದಾಟದಂತ್ಯಕ್ಕೆ ತಂಡದ ಯಶಸ್ವಿ ಬೌಲರ್ ಎನಿಸಿಕೊಂಡರು. ಇವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್ ತಂಡ, ದಿನದಾಟದ ಕೊನೆಗೆ 9 ವಿಕೆಟ್ ಕಳೆದುಕೊಂಡು 325 ರನ್ ಗಳಿಸಿತು. ಇಂಗ್ಲೆಂಡ್ ಪರ ನಾಯಕ ಜೋ ರೂಟ್ ಅಜೇಯ ಶತಕ ಬಾರಿಸಿ ಹೋರಾಟ ಮುಂದುವರೆಸಿದರು.

ಹ್ಯಾರಿ ಬ್ರೂಕ್ ಅವರ ವಿಕೆಟ್ ಪಡೆಯುವುದರೊಂದಿಗೆ ಸ್ಟಾರ್ಕ್ ಅವರು ತಮ್ಮ ಟೆಸ್ಟ್ ವೃತ್ತಿಜೀವನದ 415ನೇ ವಿಕೆಟ್‌ ಅನ್ನು ಪೂರೈಸಿದರು. ಈ ಮೂಲಕ ಅವರು, 104 ಪಂದ್ಯಗಳಲ್ಲಿ 414 ವಿಕೆಟ್‌ಗಳನ್ನು ಪಡೆದಿದ್ದ ಪಾಕಿಸ್ತಾನದ ಮಾಜಿ ನಾಯಕ ವಾಸಿಮ್ ಅಕ್ರಮ್ ಅವರನ್ನು ಹಿಂದಿಕ್ಕಿದರು.

ಮಿಚೆಲ್ ಸ್ಟಾರ್ಕ್: 102 ಪಂದ್ಯಗಳಲ್ಲಿ 415 ವಿಕೆಟ್‌ಗಳು (ಸರಾಸರಿ 26.51)

ವಾಸಿಮ್ ಅಕ್ರಮ್: 104 ಪಂದ್ಯಗಳಲ್ಲಿ 414 ವಿಕೆಟ್‌ಗಳು (ಸರಾಸರಿ 23.62)

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 400 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಎಡಗೈ ವೇಗಿಗಳ ಪಟ್ಟಿಯಲ್ಲಿ ಸ್ಟಾರ್ಕ್ ಮತ್ತು ಅಕ್ರಮ್ ಮಾತ್ರ ಇರುವುದು ವಿಶೇಷ. ಮೂರನೇ ಸ್ಥಾನದಲ್ಲಿ ಶ್ರೀಲಂಕಾದ ಚಾಮಿಂಡಾ ವಾಸ್ (355 ವಿಕೆಟ್, 111 ಪಂದ್ಯ) ಇದ್ದಾರೆ. ಇನ್ನು, ಟ್ರೆಂಟ್ ಬೌಲ್ಟ್ (317 ವಿಕೆಟ್) ಮತ್ತು ಭಾರತದ ಜಹೀರ್ ಖಾನ್ (311 ವಿಕೆಟ್) ನಂತರದ ಸ್ಥಾನಗಳಲ್ಲಿದ್ದಾರೆ.

ವಿಶ್ವದಾಖಲೆ ಮುರಿದು ಎಡಗೈ ವೇಗಿಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸ್ಟಾರ್ಕ್, ಗಬ್ಬಾ ಮೈದಾನದಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಗಬ್ಬಾದಲ್ಲಿ ಆಡಿದ ಟೆಸ್ಟ್‌ಗಳಲ್ಲಿ ಶೇನ್ ವಾರ್ನ್ ಮತ್ತು ಗ್ಲೆನ್ ಮೆಕ್‌ಗ್ರಾತ್ ನಂತರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಮೂರನೇ ಆಸ್ಟ್ರೇಲಿಯನ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿಚಾರದಲ್ಲಿ ಅವರು ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ ಅವರನ್ನೂ ಮೀರಿಸಿದ್ದಾರೆ.

error: Content is protected !!