ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ಟಾಕ್ಸಿಕ್’ ಚಿತ್ರೀಕರಣ ಪೂರ್ಣಗೊಂಡಿದೆ ಎಂಬ ಸಖತ್ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ, ಭಾರೀ ಬಜೆಟ್‌ನ ಈ ಸಿನಿಮಾ ಈ ವರ್ಷ ಮುಗಿಯುವುದು ಡೌಟು, ಅಂದುಕೊಂಡ ದಿನಾಂಕಕ್ಕೆ ರಿಲೀಸ್ ಆಗುವುದಿಲ್ಲ ಎಂಬ ಗಾಳಿಸುದ್ದಿ ಹರಡಿತ್ತು. ಆದರೆ, ಆ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕುವಂತೆ, ಚಿತ್ರೀಕರಣದ ಕೆಲಸ ಪೂರ್ಣಗೊಂಡಿದೆ ಎಂಬ ಸುದ್ದಿ ಹೊರಬಿದ್ದಿದೆ.
‘ಟಾಕ್ಸಿಕ್’ ಚಿತ್ರತಂಡದ ಸದಸ್ಯರೊಬ್ಬರು ಈ ಮಹತ್ವದ ಮಾಹಿತಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ, ಕೊನೆ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದು ಮುಗಿದಿದೆ ಎಂದೂ ಸಹ ತಿಳಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರ, ಈಗ ನಿಗದಿತ ಸಮಯದೊಳಗೆ ಕೆಲಸಗಳನ್ನು ಮುಗಿಸಲು ಸ್ಪಷ್ಟ ಯೋಜನೆಯನ್ನು ಹಾಕಿಕೊಂಡಂತೆ ಕಾಣುತ್ತಿದೆ.
‘ಟಾಕ್ಸಿಕ್’ ಸಿನಿಮಾವು 2026ರ ಮಾರ್ಚ್ 19ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಬೇಕಿದೆ. ಶೂಟಿಂಗ್ ಬೇಗನೆ ಮುಗಿದಿರುವುದರಿಂದ, ಚಿತ್ರತಂಡವು ಇನ್ನು ಮುಂದೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಾದ ಎಡಿಟಿಂಗ್, ವಿಎಫ್‌ಎಕ್ಸ್ ಮತ್ತು ಡಬ್ಬಿಂಗ್ ಕಾರ್ಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದೆ.
ದೊಡ್ಡ ಮಟ್ಟದ ಸುದ್ದಿಗೋಷ್ಠಿಗಳನ್ನು ಮಾಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಬೇಕಿರುವುದರಿಂದ, ಸಿನಿಮಾ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಅತ್ಯಗತ್ಯ.
ಸದ್ಯಕ್ಕೆ ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಶೀಘ್ರದಲ್ಲಿಯೇ ಒಂದು ಬಿಗ್ ಅನೌನ್ಸ್‌ಮೆಂಟ್ ಮೂಲಕ ಅಭಿಮಾನಿಗಳ ಗೊಂದಲಗಳಿಗೆ ತೆರೆ ಬೀಳುವ ಸಾಧ್ಯತೆ ಇದೆ.

