Friday, December 5, 2025

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶೈನ್ ಆದ ‘ಶಮಿ’: ಟೀಮ್ ಇಂಡಿಯಾಗೆ ಎಂಟ್ರಿ ಯಾವಾಗ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತಕ್ಕೆ ಮರಳುವ ಹಾದಿಯಲ್ಲಿ ನಿರಂತರ ಪರಿಶ್ರಮ ಮಾಡುತ್ತಿರುವ ಮೊಹಮ್ಮದ್ ಶಮಿ, ಮತ್ತೆ ತನ್ನ ತೀಕ್ಷ್ಣ ಬೌಲಿಂಗ್ ಶೈಲಿಯಿಂದ ದೇಶೀಯ ಕ್ರಿಕೆಟ್ ವಲಯದ ಗಮನ ಸೆಳೆದಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯ ಪ್ರಮುಖ ಪಂದ್ಯದಲ್ಲಿ ಶಮಿ ಬಂಗಾಳ ಪರ ದಾಳಿ ನಡೆಸಿ, ಸರ್ವಿಸಸ್ ತಂಡವನ್ನು ಸಂಪೂರ್ಣವಾಗಿ ನೆಲಕ್ಕಪ್ಪಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಇಂಜುರಿಯಿಂದ ಹೊರಬಂದ ಬಳಿಕ ಮೈದಾನಕ್ಕಿಳಿದ ಶಮಿ, ಮೊದಲ ಓವರ್‌ನಿಂದಲೇ ಹಳೆ ಜೋಶ್ ತೋರಿಸಿ ತಂಡದ ಬೌಲಿಂಗ್ ಶಕ್ತಿಯನ್ನು ಮತ್ತೊಮ್ಮೆ ಜಗತ್ತಿಗೆ ಪರಿಚಯಿಸಿದರು.

ಸರ್ವಿಸಸ್ ತಂಡ ಮೊದಲು ಬ್ಯಾಟಿಂಗ್ ನಡೆಸಿ 18.2 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು. ಇನ್ನಿಂಗ್ಸ್‌ನ ಮೊದಲ ಹಾಗೂ ಕೊನೆಯ ವಿಕೆಟ್‌ಗಳನ್ನು ಪಡೆದ ಶಮಿ, ಒಟ್ಟು 20 ಎಸೆತಗಳಲ್ಲಿ ಕೇವಲ 13 ರನ್ ಬಿಟ್ಟು ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು.

ಈ ಗುರಿಯನ್ನು ಬೆನ್ನಟ್ಟಿದ ಬಂಗಾಳ ತಂಡ ಆತ್ಮವಿಶ್ವಾಸದಿಂದ ಆಡುತ್ತಾ ಕೇವಲ 15.1 ಓವರ್‌ಗಳಲ್ಲಿ 167 ರನ್ ಗಳಿಸಿ ಸುಲಭ ಗೆಲುವು ದಾಖಲಿಸಿತು. ಅಭಿಷೇಕ್ ಪೊರೆಲ್ (56), ಅಭಿಮನ್ಯು ಈಶ್ವರನ್ (58) ಮತ್ತು ಯುವರಾಜ್ ಕೇಶ್ವಾನಿ (ಅಜೇಯ 36) ತಂಡದ ಗೆಲುವಿಗೆ ಪ್ರಮುಖ ಸಹಕಾರ ನೀಡಿದರು. ಈ ಗೆಲುವು ಶಮಿಯ ಅಂತಾರಾಷ್ಟ್ರೀಯ ವಾಪಸಿಗೆ ಮತ್ತೊಂದು ಬಲವಾದ ಸಂದೇಶವಾಗಿದ್ದು, ಆಯ್ಕೆದಾರರ ಗಮನ ಮತ್ತೆ ಅವರತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

error: Content is protected !!