ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ತಿಯರ್ ವಾಚ್ ವಿಚಾರವಾಗಿ ತಮ್ಮ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನ ನಕಲನ್ನು ಪ್ರಕಟಿಸಿ ಡಿಕೆಶಿ, ಬಿಜೆಪಿ ನಾಯಕನಿಗೆ ಟಾಂಗ್ ಕೊಟ್ಟಿದ್ದಾರೆ.
ನಾರಾಯಣಸ್ವಾಮಿ ಅವರನ್ನು ನೇರವಾಗಿ ಉದ್ದೇಶಿಸಿ ಮಾತನಾಡಿರುವ ಡಿಸಿಎಂ, “ಮಿಸ್ಟರ್ ನಾರಾಯಣಸ್ವಾಮಿ, ಇಲ್ಲಿದೆ ನೋಡಿ ಲೋಕಾಯುಕ್ತಕ್ಕೆ ನಾನು ಸಲ್ಲಿಸಿರೋ ಅಫಿಡವಿಟ್. ನೀವು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೀರಿ. ನಿಮ್ಮ ಬಾಯಿ ತೆವಲಿಗಾಗಿ ಮನಸ್ಸಿಗೆ ಬಂದಂತೆ ಸುಳ್ಳು ಹೇಳಬಾರದು. ಇದು ನಿಮಗೆ ಘನತೆಯನ್ನು ತರುವುದಿಲ್ಲ,” ಎಂದು ಕಿಡಿಕಾರಿದ್ದಾರೆ.
ತಮ್ಮ ಪಾರದರ್ಶಕತೆಯನ್ನು ಒತ್ತಿಹೇಳಿದ ಡಿ.ಕೆ. ಶಿವಕುಮಾರ್, “ನಾನು ಪಾರದರ್ಶಕ ವ್ಯಕ್ತಿ. ಏನನ್ನೂ ಮುಚ್ಚಿಟ್ಟುಕೊಳ್ಳಬಾರದು ಅಂತಲೇ ನಿಜ ಹೇಳಿದ್ದೇನೆ. ನನಗೇ ಆಗಲಿ ಅಥವಾ ಸಿಎಂ ಸಿದ್ದರಾಮಯ್ಯ ಅವರಿಗೆ ಆಗಲಿ, ನಮಗೆ ಇಷ್ಟವಾದ ವಾಚ್ ಕಟ್ಟಿಕೊಳ್ಳುವ ಯೋಗ್ಯತೆ ಇಲ್ಲವೇ? ಹಕ್ಕು ಇಲ್ಲವೇ…?” ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ವಿರೋಧ ಪಕ್ಷದ ನಾಯಕರ ನಡವಳಿಕೆಯನ್ನು ಟೀಕಿಸಿ, “ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ,” ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ, “ನಿಮಗಿರೋ ಸಾಂವಿಧಾನಿಕ ಅಧಿಕಾರ, ಜವಾಬ್ದಾರಿಯನ್ನು ವಿವೇಕದಿಂದ ನಿರ್ವಹಿಸಿ. ಅವಿವೇಕಿಯಂತೆ ಆಡಬೇಡಿ. ಬೇಕಿದ್ದರೆ ಲೋಕಾಯುಕ್ತ ಕಚೇರಿಗೆ ಹೋಗಿ ನನ್ನ ಅಫಿಡವಿಟ್ ಚೆಕ್ ಮಾಡಿಕೊಳ್ಳಿ,” ಎಂದು ಡಿಕೆಶಿ ಸವಾಲು ಹಾಕಿದ್ದಾರೆ. ಈ ಮೂಲಕ ವಾಚ್ ವಿವಾದಕ್ಕೆ ಲೋಕಾಯುಕ್ತ ದಾಖಲೆಗಳ ಮೂಲಕ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

